ಬೆಳಗಾವಿ : ಕೆಲವರು ನಾನೇ ಜನವರಿ 14ರ ನಂತರ ಮುಖ್ಯಮಂತ್ರಿ ಆಗ್ತೇನಿ ಅಂತಾ ಹೇಳಿಕೊಂಡ ಓಡಾಡುತ್ತಿದ್ದಾರೆ. ಆ ರೀತಿ ಹೇಳಿಕೊಂಡು ಓಡಾಡುವವರ ಬಾಯಿಗೆ ಬೀಗ ಹಾಕಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಒಂದು ಸಮುದಾಯವನ್ನ ಪಟ್ಟಿಗೆ ಸೇರಿಸಲು ಒಂದು ಪ್ರಕ್ರಿಯೆ ಇದೆ. ಆ ಪ್ರಕ್ರಿಯೆ ಮುಗಿಸಿ ಮಾರ್ಚ್ ಬಜೆಟ್‌ನೊಳಗೆ ಎಲ್ಲಾ ಸಮುದಾಯಗಳಿಗೆ ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡುತ್ತೇನೆ ಅಂದಿದ್ದಾರೆ.
ಇಂದು ಇತಿಹಾಸ ಯಾವುದು ಚರ್ಚೆ ಮಾಡಿಲ್ಲ. ಅಂತಿಮ ಹಂತದ್ದು ಮಾತ್ರ ಚರ್ಚೆ ಮಾಡಿದ್ದೇವೆ. ಜಗದೀಶ್ ಶೆಟ್ಟರ್, ಯಡಿಯೂರಪ್ಪ ಅವರಿಗೆ ಮಾಡಬೇಕು ಅನ್ನುವ ಭಾವನೆ ಇರಲಿಲ್ಲ. ಬೊಮ್ಮಾಯಿ ಅವರಿಗೆ ಮಾಡಬೇಕು ಅನ್ನೋ ಭಾವನೆ ಇದೆ. ಕಾನೂನಾತ್ಮಕವಾಗಿ ನಾವು ಮೀಸಲಾತಿ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ವಿಳಂಬ ಆಗುತ್ತಿದೆ ಎಂದರು.
ಜನವರಿ ನಂತರ ರಾಜಕೀಯ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ವ್ಯಕ್ತಿಯೊಬ್ಬ ರಾಜ್ಯದ ಮಹಾನ್ ನಾಯಕರನ್ನ ಎಲ್ಲ ರೀತಿಯಲ್ಲಿ ಸಂತೃಪ್ತಿ ಪಡೆಸಿದ್ದಾನಂತೆ. ಅವರಿಗೆ ಸಕಲ ಐಶ್ವರ್ಯ, ಭೋಗಗಳನ್ನ ದಯಪಾಲಿಸಿದ್ದಾರಂತೆ. ಜನವರಿ 14ರ ನಂತರ ಮುಖ್ಯಮಂತ್ರಿ ಆಗ್ತೇನಿ ಅಂತಾ ಹುಚ್ಚನಂತೆ ಹೇಳಿಕೊಂಡು ಓಡಾಡುತ್ತಿದ್ದಾನೆ.
ಆದ್ರೆ, ನಮ್ಮ ಪ್ರಧಾನಮಂತ್ರಿಗಳು ಬಹಳ ಗಟ್ಟಿಯಾಗಿದ್ದಾರೆ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿ ಸಿಎಂ ಬದಲಾವಣೆ ಆಗುವುದಿಲ್ಲ. ಆ ರೀತಿ ಹೇಳಿಕೊಂಡು ಓಡಾಡುವವರ ಬಾಯಿಗೆ ಬೀಗ ಹಾಕಬೇಕು. ಅಂತವರು ಮುಖ್ಯಮಂತ್ರಿ ಆದ್ರೆ ದೊಡ್ಡ ಅನಾಹುತ ಆಗುತ್ತೆ ಅಂತಾ ಶಾಸಕಾಂಗ ಸಭೆಯಲ್ಲಿ ಎಚ್ಚರಿಕೆ ಕೊಟ್ಟಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.