ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಶುಕ್ರವಾರ ಪ್ರಕಟಿಸಿದ್ದು, 25ರಲ್ಲಿ 20 ಸ್ಥಾನಗಳಿಗೆ ಸ್ಪರ್ಧಿಸುವ ತೀರ್ವನವೇ ಅಂತಿಮವಾಗಿದೆ. ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬಿ.ಜಿ.ಪಾಟೀಲ್, ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಮತ್ತೊಮ್ಮೆ ಸ್ಪರ್ಧೆ ಅವಕಾಶ ಪಡೆದಿದ್ದಾರೆ. ಜೆಡಿಎಸ್ನ ಹಾಲಿ ಸದಸ್ಯರಾದ ಸಂದೇಶ ನಾಗರಾಜ್ ಮತ್ತು ಸಿ.ಆರ್.ಮನೋಹರ್ ಕಮಲ ಪಡೆಗೆ ಸೇರಲು ಆಸಕ್ತಿ ತೋರಿಸಿದ್ದರೂ ವರಿಷ್ಠರು ಮಣೆ ಹಾಕಿಲ್ಲ.
ಜಾತಿವಾರು ಪ್ರಾತಿನಿಧ್ಯದ ಲೆಕ್ಕಾಚಾರದಲ್ಲಿ ಉಮೇದುವಾರರನ್ನು ಆಯ್ಕೆ ಮಾಡಲಾಗಿದೆ.
ವಿಜಯಪುರದ ಟಿಕೆಟ್ ಗಿಟ್ಟಿಸಿಕೊಂಡ ಪಿ.ಎಚ್.ಪೂಜಾರ್ 2004ರಲ್ಲಿ ಬಿಜೆಪಿ ತೊರೆದು, 2018ರಲ್ಲಿ ಪಕ್ಷಕ್ಕೆ ಮತ್ತೆ ವಾಪಸ್ ಆಗಿದ್ದರು. ಸಂಘದ ಪ್ರಚಾರಕರಾಗಿದ್ದ ಬಿಜೆಪಿ ಮೂಲದ ವಿಶ್ವನಾಥ್ ಜೆಡಿಎಸ್ ನಂತರ ಕಾಂಗ್ರೆಸ್ ಸೇರಿ ಮತ್ತೆ ಬಿಜೆಪಿಗೆ ಮರಳಿ ಹಾಸನದ ಅಭ್ಯರ್ಥಿಯಾಗಿದ್ದಾರೆ. ಅಲ್ಲದೆ, ಬೆಳಗಾವಿಯಲ್ಲಿ ಎರಡೂ ಸ್ಥಾನಗಳಿಗೆ ಸ್ಪರ್ಧೆ, ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ತೆರೆಮರೆಯಲ್ಲಿ ನಡೆಸಿದ ಒತ್ತಡ ತಂತ್ರವೂ ಫಲಿಸಿಲ್ಲ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪಕ್ಷ ಮೂಲದವರು ಮೇಲುಗೈ ಸಾಧಿಸಿರುವುದು ಎದ್ದು ಕಾಣುತ್ತದೆ. ಕೊಡಗು ಕ್ಷೇತ್ರದ ಹಾಲಿ ಸದಸ್ಯ ಸುನಿಲ್ ಸುಬ್ರಮಣಿ ಬದಲಿಗೆ ಅವರ ಸೋದರ ಸುಜಾ ಕುಶಾಲಪ್ಪ ಹಾಗೂ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪುತ್ರ ಡಿ.ಎಸ್.ಅರುಣ್ (ಶಿವಮೊಗ್ಗ) ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಲಾ ಒಂದು ಸ್ಥಾನಕ್ಕೆ ಸ್ಪರ್ಧೆ: ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಮೈಸೂರು ಮತ್ತು ವಿಜಯಪುರ ಜಿಲ್ಲೆ ಸ್ಥಳೀಯ ಸಂಸ್ಥೆಗಳು ದ್ವಿಸದಸ್ಯ ಕ್ಷೇತ್ರಗಳಾಗಿದ್ದು, ತಲಾ ಒಂದು ಸ್ಥಾನಕ್ಕೆ ಬಿಜೆಪಿ ಸ್ಪರ್ಧಿಸಿದೆ.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸೋಮವಾರ ಪ್ರಕಟ
ವಿಧಾನಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಸೋಮವಾರ ಪ್ರಕಟಿಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳಿಗೆ ಬರವಿಲ್ಲ. ಗೆಲ್ಲುವ ಶಕ್ತಿ ಇರುವವರು ಇದ್ದಾರೆ. ಆರರಿಂದ ಎಂಟು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಂಡ್ಯ ಅಭ್ಯರ್ಥಿಯಾಗಿ ದಿನೇಶ್ ಗೂಳಿಗೌಡರಿಗೆ ಟಿಕೆಟ್ ಕೊಟ್ಟಿದ್ದಾರೆ. ಅವರು ಕಾಂಗ್ರೆಸ್ ಸಚಿವರೊಬ್ಬರಿಗೆ ಸಹಾಯಕ ಆಗಿದ್ದವರು. ನಂತರ ಬಿಜೆಪಿ ಸಚಿವರಿಬ್ಬರಿಗೆ ಸಹಾಯಕರಾಗಿದ್ದರು. ಅಂತಹವರನ್ನು ಕರೆದು ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಹಾಗಾದರೆ, ಕಾಂಗ್ರೆಸ್ ಬಿಜೆಪಿಯ ಸಿ ಟೀಂ ಆಗಿದೆಯೆ? ಎನ್ನುವುದನ್ನು ಅವರೇ ಹೇಳಬೇಕು ಎಂದು ಟಾಂಗ್ ಕೊಟ್ಟರು.
ಸೂರಜ್ ಕಣಕ್ಕೆ: ಹಾಸನ ಕ್ಷೇತ್ರದಿಂದ ಡಾ.ಸೂರಜ್ ರೇವಣ್ಣ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಕೋವಿಡ್ ಮಾರ್ಗಸೂಚಿ ಪಾಲನೆ ಆಯೋಗ ಸೂಚನೆ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಡಿ.10ರಂದು ನಡೆಯುವ ಚುನಾವಣೆ ಸಂದರ್ಭ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಪ್ರತಿ ಚುನಾವಣೆ ಸಂಬಂಧಿತ ಚಟುವಟಿಕೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿ ಮಾಸ್ಕ್ ಧರಿಸಬೇಕು. ಚುನಾವಣಾ ಉದ್ದೇಶಗಳಿಗಾಗಿ ಬಳಸಿದ ಸಭಾಂಗಣ/ಕೊಠಡಿ/ಆವರಣದ ಪ್ರವೇಶದಲ್ಲಿ ಎಲ್ಲ ್ಲ್ಯಕ್ತಿಗಳ ಥರ್ಮಲ್ ಸ್ಕಾಯನಿಂಗ್ ಕೈಗೊಳ್ಳಬೇಕು, ಸ್ಯಾನಿಟೈಸರ್, ಸಾಬೂನು ಮತ್ತು ನೀರು ಲಭ್ಯವಾಗುವಂತೆ ಮಾಡಬೇಕು. ಎಲ್ಲ ಸಮಯದಲ್ಲೂ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಮತಗಟ್ಟೆ, ಭದ್ರತಾ ಸಿಬ್ಬಂದಿ ಸಂಚಾರಕ್ಕಾಗಿ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳನ್ನು ಸಜ್ಜುಗೊಳಿಸಬೇಕು. ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಯೊಂದಿಗೆ ಬರುವ ವ್ಯಕ್ತಿಗಳ ಸಂಖ್ಯೆಯನ್ನು ನಾಲ್ಕಕ್ಕೆ ಸೀಮಿತಗೊಳಿಸಬೇಕು. ನಾಮನಿರ್ದೇಶನ ಉದ್ದೇಶಗಳಿಗಾಗಿ ವಾಹನಗಳ ಸಂಖ್ಯೆಯನ್ನು ಮೂರಕ್ಕೆ ನಿರ್ಬಂಧಿಸಲಾಗಿದೆ.
ಪ್ರಚಾರದ ಮುನ್ನೆಚ್ಚರಿಕೆ ಕ್ರಮಗಳು: ಸಾರ್ವಜನಿಕ ರ‍್ಯಾಲಿ ಇತ್ಯಾದಿಗಳಿಗಾಗಿ 500 ಜನರನ್ನು ಒಟ್ಟುಗೂಡಿಸಲು ಅನುಮತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಕೋವಿಸ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಲಾಗಿದೆ.
ಕಾಂಗ್ರೆಸ್ ಪಟ್ಟಿ ಇಂದು ಪ್ರಕಟ ಸಾಧ್ಯತೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಉಮೇದುವಾರರ ಪಟ್ಟಿ ಶನಿವಾರ ಪ್ರಕಟವಾಗುವ ಸಾಧ್ಯತೆಯಿದೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕುರಿತು ಚರ್ಚೆಗೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದು, ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ಹುರಿಯಾಳುಗಳ ಪಟ್ಟಿ ಬಹುತೇಕ ಅಂತಿಮವಾಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಜತೆ ಶನಿವಾರ ಅಂತಿಮ ಸುತ್ತಿನ ಮಾತುಕತೆ ನಡೆಸಿದ ನಂತರ ಪಟ್ಟಿ ಹೊರ ಬೀಳುವ ನಿರೀಕ್ಷಿಯಿದೆ ಎಂದು ಮೂಲಗಳು ತಿಳಿಸಿವೆ.