ಬೆಂಗಳೂರು: ನಕಲಿ ಛಾಪಾ ಕಾಗದ ಸಿದ್ಧಪಡಿಸುತ್ತಿದ್ದ ಐವರು ಆರೋಪಿಗಳನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಹುಸೇನ್ ಮೋದಿ ಬಾಬು, ಸೀಮಾ, ನಯಾಜ್ ಅಹ್ಮದ್, ಶಬ್ಬೀರ್ ಅಹ್ಮದ್, ಹರೀಶ್ನನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 63 ಲಕ್ಷ ರೂಪಾಯಿ ಮೌಲ್ಯದ ನಕಲಿ ಛಾಪಾ ಕಾಗದ (stamp papers) ವಶಕ್ಕೆ ಪಡೆದಿದ್ದಾರೆ. ಹೈಕೋರ್ಟ್ (High court) ಸೂಚನೆ ಮೇರೆಗೆ ರಚನೆಯಾಗಿದ್ದ ಎಸ್‌ಐಟಿ (SIT) ಅಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆಸಿದ್ದು, ಐವರು ಆರೋಪಿಗಳನ್ನು ಸದ್ಯ ವಿಚಾರಣೆಗೊಳಪಡಿಸಲಾಗಿದೆ.
ನಕಲಿ ಛಾಪಾ ಕಾಗದ ಸಂಬಂಧ ರಚನೆಯಾಗಿದ್ದ ಎಸ್‌ಐಟಿ ತಂಡದ ಕಾರ್ಯಾಚರಣೆ ವೇಳೆ ನಕಲಿ ಛಾಪಾ ಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. 2 ರೂಪಾಯಿ ಛಾಪಾ ಕಾಗದದಿಂದ 25 ಸಾವಿರ ರೂ. ಮೌಲ್ಯದ ಛಾಪಾ ಕಾಗದದವರೆಗೂ ಎಲ್ಲವನ್ನೂ ನಕಲಿ ಮಾಡುತ್ತಿದ್ದ ಆರೋಪಿಗಳು, ನಕಲಿ ಫಾಂಟ್ , ಸೀಲ್. ಸ್ಕ್ರೀನ್ ಪ್ರಿಂಟಿಂಗ್ ಬಳಸಿ ಚಾಪಾ ಕಾಗದ ಸೃಷ್ಟಿ ಮಾಡುತ್ತಿದ್ದರು.
ಮೈಸೂರು ಮಹರಾಜರ ಕಾಲದ ರೀತಿಯ ಛಾಪಾ ಕಾಗದ ಕೂಡ ಆರೋಪಿಗಳು ಸೃಷ್ಟಿ ಮಾಡಿದ್ದು, ಹಳೆಯ ಆಸ್ತಿ ಕಬಳಿಸುವ ಉದ್ದೇಶದಿಂದ ಇಂತಹ ನಕಲಿ ಛಾಪಾ ಕಾಗದ ಸೃಷ್ಟಿಯಾಗುತ್ತಿತ್ತು ಎನ್ನುವುದು ತಿಳಿದುಬಂದಿದೆ. ಸದ್ಯ ಹಳೆಯ ಸ್ಟಾಂಪ್ ಪೇಪರ್ ಮತ್ತು ಹೊಸ ಪೇಪರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಳೆ ಛಾಪಾಕಾಗದ ಮಾರಾಟ ಮಾಡ್ತಿದ್ದವರ ಮನೆ ಮೇಲೆ ಪೊಲೀಸರ ದಾಳಿ
ಹಳೆ ಛಾಪಾಕಾಗದ ಮಾರಾಟ ಮಾಡುತ್ತಿದ್ದವರ ಮನೆ ಮೇಲೆ ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಸಾವಿರಾರು ಛಾಪಾಕಾಗದ ಪತ್ತೆಯಾಗಿದೆ. ಡಿಸಿಪಿ ಶರಣಪ್ಪ, ಎಸಿಪಿ ಸಕ್ರಿ ನೇತೃತ್ವದಲ್ಲಿ ಬ್ಯಾಟರಾಯನಪುರ, ಕೋರಮಂಗಲ ಸೇರಿ ನಾಲ್ಕು ಕಡೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಹಳೆ ಛಾಪಾಕಾಗದ ಬಳಸಿಕೊಂಡು ಸಾಕಷ್ಟು ಅಪರಾಧ ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಲಿಟಿಗೇಷನ್ ಸೈಟ್ಗಳನ್ನು ಕಬ್ಜಾ ಮಾಡುವುದಕ್ಕೆ ಕಾಗದ ಪತ್ರಗಳನ್ನು ಸಿದ್ಧಮಾಡಲಾಗುತ್ತಿತ್ತು. ದಾಳಿಯಲ್ಲಿ ಐವರು ಛಾಪಾಕಾಗದ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.