ಮೈಸೂರಿನ ಕಾರ್ಯಕ್ರಮವೊಂದರಲ್ಲಿ ನಾದ ಬ್ರಹ್ಮ ಹಂಸಲೇಖ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಪೇಜಾವರ ಶ್ರೀಗಳ ಬಗ್ಗೆ ಮಾತಾಡಿದ್ದ ಸಂಗೀತ ನಿರ್ದೇಶಕ, ದಲಿತರು, ಅಸ್ಪೃಶ್ಯತೆ ಹಾಗೂ ಸಮಾನತೆ ಕುರಿತು ಮಾತಾಡಿದ್ದರು. ಈ ವೇಳೆ ಪೇಜಾವರ ಶ್ರೀಗಳ ಹೆಸರನ್ನು ಪ್ರಸ್ತಾಪ ಮಾಡಿದ್ದರು.
ಹಂಸಲೇಖ ಆಡಿದ ಆ ಮಾತುಗಳೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
“ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ..? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..?,” ಅಂತ ಹಂಸಲೇಖ ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಾದ ಬ್ರಹ್ಮನ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ.
ಸರಿಗಮಪದಿಂದ ಹಂಸಲೇಖ ಕೈ ಬಿಡಿಸೋಶಿಯಲ್ ಮೀಡಿಯಾದಲ್ಲಿ ಹಂಸಲೇಖ ಆಡಿದ ಮಾತಿನ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ. ಪೇಜಾವರ ಶ್ರೀ ಬಗ್ಗೆ ಹೀಗೆ ಮಾತಾಡಬಾರದಿತ್ತು ಅಂತ ಕಿಡಿಕಾರಿದ್ದಾರೆ. ಮತ್ತೆ ಕೆಲವರು ಹಂಸಲೇಖರನ್ನೂ ಬೆಂಬಲಿಸುತ್ತಿದ್ದಾರೆ. ಆದರೆ, ವಿರೋಧಿಸುವವರು ಹಂಸಲೇಖರನ್ನು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದಿಂದ ಬಾಯ್ ಕಾಟ್ ಮಾಡಿ ಅಂತ ಕಿಡಿಕಾರುತ್ತಿದ್ದಾರೆ.
ಟಿಆರ್‌ಪಿ ಕಳೆದುಕೊಳ್ಳುತ್ತಿರಾ?
ಹಂಸಲೇಖ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದ ಪ್ರಮುಖ ಜಡ್ಜ್ ಆಗಿದ್ದಾರೆ. ಹೀಗಾಗಿ ನೆಟ್ಟಿಗರು “ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದಿಂದ ಹಂಸಲೇಖರನ್ನು ಕಿತ್ತೊಗೆಯಿರಿ. ಇಲ್ಲದೆ ಹೋದರೆ ಟಿಆರ್‌ಪಿ ಕಳೆದುಕೊಳ್ಳುತ್ತೀರಾ ಎಂದು ವಾಹಿನಿಯವರಿಗೆ ಎಚ್ಚರಿಕೆ ನೀಡಿದ್ದಾರೆ. ಮತ್ತೆ ಕೆಲವರು ಇವರು ಮಹಾಗುರುಗಳು ಅಂತ ಅನಿಸಿಕೊಳ್ಳಲು ಯೋಗ್ಯರಲ್ಲ. ಸರಿಗಮಪ ಕಾರ್ಯಕ್ರಮದಿಂದ ಕೈ ಬಿಡಿ ” ಎಂದು ನಾದಬ್ರಹ್ಮನ ವಿರುದ್ಧ ನೆಟ್ಟಿಗರು ಕಿಡಿಕಾಡಿದ್ದಾರೆ. ತಾವಾಡಿದ ಮಾತುಗಳಿಗೆ ನೆಟ್ಟಿಗರು ಕೆರಳುತ್ತಿದ್ದಂತೆ ಹಂಸಲೇಖ ಕ್ಷಮೆಯಾಚಿಸಿದ್ದರು. ಆದರೂ, ನಾದಬ್ರಹ್ಮ ಕಿಡಿಕಾರುವುದನ್ನು ನಿಲ್ಲಿಸಿಲ್ಲ.
ಪದ್ಮವಿಭೂಷಣ ಬಂದಿದ್ದಕ್ಕೆ ಈ ಟೀಕೆ
ವಿಶ್ವೇಶತೀರ್ಥ ಪೇಜಾವರ ಶ್ರೀಗಳು ವಿರುದ್ಧ ಟೀಕೆ ಮಾಡಿದ್ದ ಹಂಸಲೇಖರ ಹೇಳಿಕೆ ಸಂಬಂಧ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.”ನಮ್ಮ ಗುರುಗಳಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದಿದೆ. ಹಾಗಾಗಿ ಹಂಸಲೇಖ ಅವರು ನನ್ನ ಗುರುಗಳನ್ನು ಟೀಕಿಸಿರಬೇಕು, ಸಮಾಜ ಹಂಸಲೇಖ ಅವರನ್ನು ಎತ್ತರದ ಸ್ಥಾನದಲ್ಲಿರಿಸಿದೆ ಅಂಥಹವರ ಬಾಯಿಂದ ಇಂಥಹಾ ಮಾತುಗಳು ಬರಬಾರದಿತ್ತು. ಇದರಿಂದ ಸಮಾಜ ಬಹಳ ನೊಂದಿದೆ. ”ಗುರುಗಳು ಇಂಥವರನ್ನು ಓಲೈಸಲು ಸಮಾಜಮುಖಿ ಕೆಲಗಳನ್ನೂ ಮಾಡುತ್ತಿರಲಿಲ್ಲ. ಹಾಗಾಗಿ ಇನ್ಯಾರೋ ತೆಗಳುತ್ತಾರೆ ಎನ್ನುವ ಕಾರಣಕ್ಕೆ ಅದರಿಂದ ಹಿಂದೆ ಸರಿದವರೂ ಅಲ್ಲ. ಗುರುಗಳ ಗುರಿ ನೇರವಾಗಿತ್ತು. ಸಮಾಜದಲ್ಲಿ ಯಾರೂ ಸಹ ನಾವು ಬಹಿಷ್ಕೃತರು ಎಂದುಕೊಳ್ಳಬಾರದು, ಎಲ್ಲರೂ ಒಂದಾಗಿ ಸಮಾಜದಲ್ಲಿ ಸಾಗಬೇಕು ಎಂಬುದು ಗುರುಗಳ ಉದ್ದೇಶವಾಗಿತ್ತು” ಎಂದಿದ್ದಾರೆ.
ಸಮಜಾಯಿಷಿ ನೀಡಲು ಇನ್ನೂ ಮುಂದಾಗಿಲ್ಲ
ಒಟ್ನಲ್ಲಿ ಹಂಸಲೇಖ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಆಡಿದ ಮಾತು ಈಗ ಎಲ್ಲೆಡೆ ಭಾರಿ ಚರ್ಚೆಗೆ ಒಳಗಾಗುತ್ತಿದೆ. ನಾದಬ್ರಹ್ಮನ ವಿರುದ್ಧ ಜನರು ಕೆಂಡಾಮಂಡಲ ಆಗಿದ್ದಾರೆ. ಇತ್ತ ಕೆಲವರು ನಾದಬ್ರಹ್ಮರನ್ನು ತೀರ್ಪುಗಾರಿಕೆಯಿಂದ ಕೈಬಿಡುವಂತೆ ಕೇಳಿ ಕೊಳ್ತಿದ್ದಾರೆ. ಆದರೆ, ಜೀ ಕನ್ನಡ ವಾಹಿನಿ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಲ್ಲ. ಹಂಸಲೇಖ ವಿರುದ್ಧ ಆಕ್ರೋಶಗೊಂಡರಿಗೆ ಸಮಜಾಯಿಷಿ ನೀಡಲು ಇನ್ನೂ ಮುಂದಾಗಿಲ್ಲ.