ಹಾಸನ: ಎಚ್.ಡಿ.ರೇವಣ್ಣ ಕುಟುಂಬ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಚುನಾವಣೆಯಲ್ಲಿ ಅವರ ಕುಟುಂಬದವರನ್ನೆಲ್ಲಾ ಸೋಲಿಸಿ ಬಿಡು ತಾಯಿ. ಅವರು ಮುಂದೆ ಬರಲು ಯಾರನ್ನೂ ಬಿಡುತ್ತಿಲ್ಲ… ತಾಯಿ ನಿನ್ನ ಕೃಪೆಯಿಂದ ಹೊಳೆನರಸೀಪುರದ ಎಂಎಲ್‌ಎ ಬದಲಾಗಬೇಕು, ಆ ಮೂಲಕ ಹೊಳೆನರಸೀಪುರ ಜನರಿಗೆ ಒಳ್ಳೇದು ಮಾಡು ತಾಯಿ… ನನ್ನ ದೊಡ್ಡ ಮಗನಿಗೆ ಮದುವೆ ಮಾಡು… ಒಂದು ವರ್ಷದೊಳಗೆ ಮನೆ ಕಟ್ಟಿದರೆ 301 ರೂಪಾಯಿಯನ್ನ ನಿನ್ನ ಹುಂಡಿಗೆ ಕಾಣಿಕೆ ಹಾಕುವೆ… ತಾಯಿ ನನಗೆ ಬೇಗ ಪ್ರಮೋಷನ್ ಕೊಡಮ್ಮ… ಒಂದು ವರ್ಷದೊಳಗೆ ನನ್ನ ಇಬ್ಬರು ಹೆಣ್ಣುಮಕ್ಕಳಿಗೂ ಮದುವೆ ಮಾಡಿಸು… ಭೂಗಳ್ಳನಿಂದ ನನ್ನ ಭೂಮಿ ಕೊಡಿಸು… ಕರೊನಾ ತೊಲಗಿಸಿ ಎಲ್ಲರಿಗೂ ಒಳ್ಳೆಯ ಆರೋಗ್ಯ ಕೊಡು…
ಇದು ಹಾಸನಾಂಬೆ ದೇವಿಗೆ ಭಕ್ತರು ಹರಕೆ ಮಾಡಿ ಬರೆದಿರುವ ವಿಭಿನ್ನ ಪತ್ರಗಳು.
ಹಾಸನಾಂಭೆ ದರ್ಶನೋತ್ಸವದ ಬಳಿಕ ದೇಗುಲದ ಹುಂಡಿ ಹಣ ಎಣಿಕೆ ಕಾರ್ಯ ಸೋಮವಾರ ನಡೆಯಿತು. ಆ ವೇಳೆ ಭಕ್ತರು ದೇವಿಗೆ ವಿಭಿನ್ನ ಕೋರಿಕೆಯೊಂದಿಗೆ ಬರೆದಿರುವ ನೂರಾರು ಪತ್ರಗಳೂ ಸಿಕ್ಕಿವೆ. ಹಾಸನದ 35 ನೇ ವಾರ್ಡಿನ ವ್ತಕ್ತಿಯೊಬ್ಬರು ‘ನಮ್ಮ ಬೀದಿಯ ರಸ್ತೆಯಲ್ಲಿ ಗುಂಡಿ ಬಿದ್ದಿದೆ, ಅದನ್ನು ಸರಿ ಮಾಡಿಸು ತಾಯಿ’ ಎಂದು ಪತ್ರ ಬರೆದಿದ್ದಾರೆ. ಅತ್ತ ವಿದ್ಯಾರ್ಥಿಯೊಬ್ಬರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ಪರ್ಸಂಟೇಜ್ ಬರುವ ಹಾಗೆ ಮಾಡು ಎಂದು ಕಾಗದ ಬರೆದು ದೇವಿಗೆ ಮೊರೆ ಇಟ್ಟಿದ್ದಾನೆ.
ನನಗೆ ಗಂಡು ಮಗು ಕರುಣಿಸು, ನಾನು ಬೇಡಿದ ವರವ ಕೊಟ್ಟರೆ ನಿನ್ನ ಹುಂಡಿಗೆ ಐದು ಸಾವಿರ ರೂಪಾಯಿ ಕೊಡ್ತೇನೆ… ಗಂಡನ ಕುಡಿತದ ಚಟ ಹೋಗಲಿ… ತಾನು ಇಷ್ಟಪಟ್ಟ ಹುಡುಗನ ಜತೆ ಮದುವೆ ಮಾಡಿಸು ತಾಯಿ ಎಂದು ಯುವತಿಯೊಬ್ಬಳು ರಕ್ತದಲ್ಲಿ ಪತ್ರ ಬರೆದಿದ್ದಾಳೆ. ಹಾಸನ ಜಿಲ್ಲಾ ಕಸಾಪ ಪರಿಷತ್ಗೆ ಸಾಹಿತಿ ಡಾ.ಎಚ್.ಎಲ್.ಮಲ್ಲೇಶ್ ಗೌಡರನ್ನು ಅಧ್ಯಕ್ಷರಾಗುವಂತೆ ಅನುಗ್ರಹಿಸು ತಾಯಿ… ವಸೂಲಿ ಹಾಗೂ ದಂಧೆಕೋರರ ಕಪಿಮುಷ್ಠಿಯಿಂದ ಕನ್ನಡಎ ಪವಿತ್ರ ಭವನ ಮುಕ್ತವಾಗಲಿ… ಹೀಗೆ ತರೇಹವಾರಿ ಪತ್ರಗಳು ಹಾಸನಾಂಬೆ ಹುಂಡಿಯಲ್ಲಿ ಸಿಕ್ಕಿವೆ.
ತಮ್ಮ ನೋವು, ಸಮಸ್ಯೆಗಳನ್ನು ಬಗೆಹರಿಸುವಂತೆ ದೇವರಲ್ಲಿ ಭಕ್ತರು ಮೊರೆ ಇಡುವುದು ಸಾಮಾನ್ಯ. ಆದರೆ ಹಾಸನದ ಪ್ರಭಾವಿ ರಾಜಕಾರಣಿ ಕುಟುಂಬ ಎನ್ನಿಸಿಕೊಂಡ ಎಚ್.ಡಿ.ರೇವಣ್ಣರ ಕುಟುಂಬ ಸದಸ್ಯರನ್ನೇ ಸೋಲಿಸುವಂತೆ ದೇವಿಗೆ ಪತ್ರ ಬರೆದಿರುವುದು ಹಾಗೂ ಹೊಳೆನರಸೀಪುರ ಶಾಸಕರ ಬದಲಾವಣೆಗೂ ದೇವಿಗೆ ಮನವಿ ಮಾಡಿರುವ ಪತ್ರಗಳು ಮಾತ್ರ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿವೆ.