ನವದೆಹಲಿ: ಅರುಣಾಚಲ ಪ್ರದೇಶದಲ್ಲಿ 4.5 ಕಿ.ಮೀ. ಭಾರತದ ಪ್ರದೇಶಕ್ಕೆ ಚೀನಾ ಪ್ರವೇಶಿಸಿದೆ ಎಂಬ ಪೆಂಟಗನ್ ವರದಿಯನ್ನು ಪ್ರಧಾನಿ ಮೋದಿ ಅವರು ಅಲ್ಲಗಳೆದು, ಭಾರತದ ಭೂಪ್ರದೇಶಕ್ಕೆ ಯಾರೂ ಪ್ರವೇಶಿಸಿಲ್ಲ ಎಂದು ಚೀನಾಕ್ಕೆ ನೀಡಿರುವ ‘ಕ್ಲೀನ್ ಚಿಟ್’ ಅನ್ನು ಹಿಂಪಡೆಯುವಂತೆ ಕಾಂಗ್ರೆಸ್ ಶನಿವಾರ ಒತ್ತಾಯಿಸಿದೆ.
ಅಲ್ಲದೇ, ಜಗತ್ತನ್ನು ದಾರಿ ತಪ್ಪಿಸಿದ್ದಕ್ಕಾಗಿ ಪ್ರಧಾನಿ ಕ್ಷಮೆಯಾಚಿಸುವಂತೆ ಆಗ್ರಹಿಸಿದೆ.
ಚೀನಾದೊಂದಿಗಿನ ನಮ್ಮ ಎಲ್ಲಾ ಗಡಿಗಳಲ್ಲಿ ಏಪ್ರಿಲ್ 2020ರಂತೆ ಯಥಾಸ್ಥಿತಿಯು ಯಾವಾಗ ಮರುಸ್ಥಾಪನೆಯಾಗಲಿದೆ ಎಂಬುದಕ್ಕೆ ಪ್ರಧಾನಿ ಉತ್ತರಿಸಬೇಕು. ಅಲ್ಲದೇ, ಯಥಾಸ್ಥಿತಿಗೆ ತರಲು ಗಡುವು ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಒತ್ತಾಯಿಸಿದ್ದಾರೆ.
ಚೀನಾದ ಅತಿಕ್ರಮಣವನ್ನು ಈಗ ಪೆಂಟಗನ್ ತನ್ನ ವಾರ್ಷಿಕ ವರದಿಯಲ್ಲಿ ಅಮೆರಿಕದ ಕಾಂಗ್ರೆಸ್‌ಗೆ ದೃಢಪಡಿಸಿದೆ ಎಂದು ಖೇರಾ ಹೇಳಿದರು.
ಪ್ರಧಾನಿ ಮತ್ತು ಗೃಹ ಸಚಿವರು ಅತಿಕ್ರಮಣ ನಿರಾಕರಿಸಿದ್ದಾರೆ. ಮೋದಿ ಚೀನಾಕ್ಕೆ ‘ಕ್ಲೀನ್ ಚಿಟ್’ ನೀಡಿ 17 ತಿಂಗಳಾಗಿದೆ ಎಂದು ಖೇರಾ ಹೇಳಿದರು.
‘ಆ ಕ್ಲೀನ್ ಚಿಟ್ ನಮ್ಮ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಏಕೆಂದರೆ ಕ್ಲೀನ್ ಚಿಟ್ ಅನ್ನು ಚೀನಾ ಪ್ರಪಂಚದಾದ್ಯಂತ ಬಳಸಿದೆ. ಚೀನಾ ಈ ಕ್ಲೀನ್ ಚಿಟ್‌ನಿಂದ ಧೈರ್ಯಶಾಲಿಯಾಗಿದೆ. ಅರುಣಾಚಲಪ್ರದೇಶ ಮತ್ತು ಲಡಾಖ್‌ನಲ್ಲಿ ಮಾತ್ರವಲ್ಲದೆ ಉತ್ತರಾಖಂಡದಲ್ಲಿಯೂ ಸಹ ಚೀನಾ ಸೈನಿಕರು (ಪಿಎಲ್‌ಎ) ಪ್ರವೇಶಿಸಿ ನಮ್ಮ ಮೂಲಸೌಕರ್ಯ ನಾಶಪಡಿಸಿದರು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಇದು ಬಹಳ ಗಂಭೀರ ವಿಷಯ. ಪ್ರಧಾನಿಯವರು ಚೀನಾಕ್ಕೆ ನೀಡಿರುವ ಕ್ಲೀನ್ ಚಿಟ್ ಅನ್ನು ಹಿಂಪಡೆಯಬೇಕು. ಚೀನಾದೊಂದಿಗೆ ನಮ್ಮ ಎಲ್ಲಾ ಗಡಿಗಳಲ್ಲಿ ಅದು ಡೆಪ್ಸಾಂಗ್ ಆಗಿರಲಿ, ಗೋಗ್ರಾ ಹಾಟ್ ಸ್ಪ್ರಿಂಗ್ಸ್, ದೌಲತ್ ಬೇಗ್ ಓಲ್ಡಿ ಅಥವಾ ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 2020ರ ಹಿಂದಿನ ಯಥಾಸ್ಥಿತಿ ಮರುಸ್ಥಾಪಿಸಲು ಗಡುವು ನೀಡಬೇಕು’ ಎಂದು ಅವರು ಹೇಳಿದರು.
Laxmi News 24×7