ಬೆಂಗಳೂರು: ಪುನೀತ್ ರಾಜಕುಮಾರ್ ಅವರ ಹಠಾತ್ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ವ್ಯಕ್ತವಾಗಿರುವ ಆಗ್ರಹದ ಬೆನ್ನಿಗೇ ಅವರ ಸಾವಿಗೆ ಸಂಬಂಧಿಸಿ ಮತ್ತೊಂದು ಅನುಮಾನ ಮೂಡಿದ್ದು, ಆ ಕುರಿತು ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.
ಪುನೀತ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಡಾ.ರಾಜ್ ಕುಟುಂಬದ ವೈದ್ಯ ಡಾ. ರಮಣ ರಾವ್ ಕ್ಲಿನಿಕ್ ವಿರುದ್ಧ ತನಿಖೆ ನಡೆಸುವಂತೆ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪುನೀತ್ ಅವರ ಅಭಿಮಾನಿ ಎಂದು ಹೇಳಿಕೊಂಡಿರುವ, ಕುರುಬರಹಳ್ಳಿಯ ಅರುಣ್ ಪರಮೇಶ್ವರ್ ಎಂಬವರು ಈ ದೂರು ನೀಡಿದ್ದಾರೆ.
ಪುನೀತ್ ರಾಜಕುಮಾರ್ ಅವರು ಮನೆಯಿಂದ ಡಾ.ರಮಣ ರಾವ್ ಕ್ಲಿನಿಕ್ಗೆ ಹೋಗುವಾಗ ಆರಾಮಾಗಿಯೇ ಹೋಗಿರುತ್ತಾರೆ. ಆದರೆ ಅಲ್ಲಿಂದ ವಿಕ್ರಮ್ ಆಸ್ಪತ್ರೆಗೆ ಹೋಗಲು ಯಾಕೆ ತಡವಾಯಿತು? ಅವರು ಅಷ್ಟು ತುರ್ತು ಪರಿಸ್ಥಿತಿಯಲ್ಲಿದ್ದರೂ ಯಾಕೆ ಅವರನ್ನು ಆಂಬುಲೆನ್ಸ್ನಲ್ಲಿ ವಿಕ್ರಮ್ ಆಸ್ಪತ್ರೆಗೆ ಕಳಿಸಿಲ್ಲ? ಎಂದೆಲ್ಲ ದೂರಿನಲ್ಲಿ ಪ್ರಶ್ನಿಸಲಾಗಿದೆ.
ಅಂದು ಕ್ಲಿನಿಕ್ನಲ್ಲಿ ನಡೆದ ಘಟನಾವಳಿಗಳ ಕುರಿತ ಸಿಸಿಟಿವಿ ಕ್ಲಿಪ್ಪಿಂಗ್ ಯಾಕೆ ಮಾಧ್ಯಮಗಳಿಗೆ ನೀಡುತ್ತಿಲ್ಲ? ಅಲ್ಲಿನ ವೈದ್ಯರ ನಿರ್ಲಕ್ಷ್ಯವೇ ಪುನೀತ್ ಸಾವಿಗೆ ಕಾರಣವೇ? ಎಂದೂ ಪ್ರಶ್ನಿಸಲಾಗಿದ್ದು, ಅಪ್ಪು ಸಾವಿನ ಕುರಿತು ಕೆಲವು ಗೊಂದಲಗಳಿವೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಅವರ ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ಅರುಣ್ ದೂರು ನೀಡಿದ್ದಾರೆ.
ಅರುಣ್ ನೀಡಿರುವ ದೂರನ್ನು ಸ್ವೀಕರಿಸಿರುವುದಾಗಿ ಸದಾಶಿವನಗರ ಪೊಲೀಸರು ತಿಳಿಸಿದ್ದಾರೆ. ಆದರೆ ಆ ಕುರಿತಂತೆ ಮುಂದಿನ ಪ್ರಕ್ರಿಯೆ ನಡೆದಿಲ್ಲ. ಈ ರೀತಿಯ ಆರೋಪಗಳಿಗೆ ಸಂಬಂಧಿಸಿದಂತೆ ಪುನೀತ್ ಕುಟುಂಬಸ್ಥರು ದೂರು ನೀಡಿದರಷ್ಟೇ ಪ್ರಕರಣ ದಾಖಲಾಗುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.
Laxmi News 24×7