ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೂರು ದಿನಗಳ ಹಿಂದೆ ರಿಲೀಸ್ ಆಗಿದ್ದ ರೌಡಿಶೀಟರ್ನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗದರನಹಳ್ಳಿಯ ಶಿವಪುರ ಬಳಿ ನಡೆದಿದೆ.
ಜೆ.ಸಿ ಆನಂದ್ (36) ಕೊಲೆಯಾದ ರೌಡಿಶೀಟರ್. ಇಂದು ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಪೀಣ್ಯ ಠಾಣೆಯ ರೌಡಿಶೀಟರ್ ಆಗಿದ್ದ ಮೃತ ಆನಂದ್ ಕಳೆದ ಮೂರು ದಿನಗಳಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಐದಾರು ಜನ ಬೈಕ್ ನಲ್ಲಿ ಬಂದು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಎಸ್ಕೇಪ್ ಆಗಿದ್ದಾರೆ. ಸದ್ಯ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
2016 ರಲ್ಲಿ ಜೆಡಿಎಸ್ ಲೀಡರ್ ಆಗಿ ಗುರುತಿಸಿಕೊಂಡಿದ್ದ ಮೃತ ರೌಡಿಶೀಟರ್ ಆನಂದ್ 18 ವರ್ಷದವನಿದ್ದಾಗಲೇ ಕೊಲೆ ಮಾಡಿ ಜೈಲು ಸೇರಿದ್ದನಂತೆ. ಬಳಿಕ ಅಪ್ಪಿ ಎಂಬಾತನನ್ನ ಕೂಡ ಕೊಲೆ ಮಾಡಿದ್ದ ಆನಂದ್ ಕೆಲ ದಿನಗಳ ಹಿಂದೆ ಕಿಡ್ನಾಪ್ ಕೇಸ್ ವೊಂದರಲ್ಲಿಯೂ ಜೈಲು ಸೇರಿ ಮೂರು ದಿನಗಳಿಂದಷ್ಟೇ ಬಿಡುಗಡೆಯಾಗಿದ್ದ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿರೋ ಪೀಣ್ಯ ಪೊಲೀಸರು ಹಳೆ ದ್ವೇಷಕ್ಕೆ ಪರಿಚಿತರೇ ಕೊಲೆಮಾಡಿರೋ ಶಂಕೆ ವ್ಯಕ್ತಪಡಿಸಿದ್ದಾರೆ.
Laxmi News 24×7