Breaking News

ಪೊಲೀಸರ ನಿದ್ದೆಗೆಡಿಸಿದೆ ‘ಯುವತಿಯ ಕೊಳೆತ ಕಾಲು’: ನೀರುಗಂಟಿಗಳಿಗೆ ತಪ್ಪದ ಪೀಕಲಾಟ

Spread the love

ರಾಮನಗರ: ಚನ್ನಪಟ್ಟಣದಲ್ಲಿ ಕುಡಿವ ನೀರಿನ ಓವರ್​ಹೆಡ್ ಟ್ಯಾಂಕ್​ನ ಕೊಳವೆಯಲ್ಲಿ ಮಹಿಳೆಯ ಕೊಳೆತ ಕಾಲು ಪತ್ತೆಯಾದ ಪ್ರಕರಣದ ಜಾಡು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಕೆಲವು ದಿನಗಳ ಹಿಂದೆ ಚನ್ನಪಟ್ಟಣದ ನ್ಯಾಯಾಲಯಗಳ ಸಂಕೀರ್ಣದ ಸಮೀಪವೇ ಇರುವ ಟ್ಯಾಂಕ್​ನ ಕೊಳವೆಯಲ್ಲಿ ಮನುಷ್ಯನ ಕಾಲು ಪತ್ತೆ ಆಗಿತ್ತು. ಈ ಪ್ರಕರಣ ಚನ್ನಪಟ್ಟಣದ ಜನತೆಯಲ್ಲಿ ಆತಂಕ ಉಂಟು ಮಾಡಿದ್ದು ಮಾತ್ರವಲ್ಲದೆ, ಪೊಲೀಸ್ ಇಲಾಖೆಗೆ ಸವಾಲಾಗಿದೆ. ಆದರೆ, ಇದರ ಜಾಡು ಹಿಡಿಯುವುದು ಸವಾಲಿನ ಕೆಲಸವಾಗಿದೆ.

ಯುವತಿ ಕಾಲಿರಬಹುದೆಂಬ ಶಂಕೆ?: ಪ್ರಕರಣದ ತನಿಖೆಯಲ್ಲಿ ಶವಪರೀಕ್ಷೆ ವರದಿ ಹೆಚ್ಚಿನ ಮಾಹಿತಿ ನೀಡುತ್ತದೆ ಎನ್ನುವ ನಿರೀಕ್ಷೆ ಇತ್ತಾದರೂ ಪೊಲೀಸರಿಗೆ ಇದರಿಂದಲೂ ಮಾಹಿತಿ ಲಭ್ಯವಾಗಿಲ್ಲ. ವಿಜಯವಾಣಿಗೆ ಸಿಕ್ಕ ಮಾಹಿತಿ ಪ್ರಕಾರ ವೈದ್ಯರು ಕೊಳೆತ ಕಾಲಿನ ಪರೀಕ್ಷೆ ನಡೆಸಿದ್ದು, ಇದು ಸುಮಾರು 23-25 ವರ್ಷ ಪ್ರಾಯದ ಯುವತಿಯದ್ದಾಗಿದೆ. ಅಲ್ಲದೆ ಕಾಲು ದೊರೆತ ಮೂರ್ನಾಲ್ಕು ದಿನಗಳ ಮೊದಲೇ ಯುವತಿಯನ್ನು ಕೊಲೆ ಮಾಡಿ ಆಕೆಯ ಕಾಲು ಕತ್ತರಿಸಿ ಇಲ್ಲಿ ತಂದು ಹಾಕಲಾಗಿದೆ ಎನ್ನಲಾಗಿದೆ. ಇದರ ಹೊರತಾಗಿ ಪೊಲೀಸರಿಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.

ನೀರುಗಂಟಿಗಳಿಗೆ ಪೀಕಲಾಟ: ಇದರ ನಡುವೆ ದೇಹದ ಇತರ ಭಾಗ ನೀರು ಸರಬರಾಜು ಕೊಳವೆಯಲ್ಲಿ ಬೇರೆ ಕಡೆ ಇರಬಹುದು ಎನ್ನುವ ಶಂಕೆ ಪೊಲೀಸರಿಗೆ ಮೂಡಿದ್ದು, ಇದು ನೀರುಗಂಟಿಗಳಿಗೆ ಪೀಕಲಾಟ ತಂದಿದೆ. ಇನ್ನು ಹುಡುಕಾಟದಲ್ಲಿ ಇರುವ ಕಾರಣ ಪ್ರತಿದಿನ ನೀರುಗಂಟಿಗಳನ್ನು ಕರೆದುಕೊಂಡು ಹೋಗಿ ಅವರಿಂದ ಸ್ಥಳ ಅಗೆತ ಮಾಡಿಸುವುದೂ ಸೇರಿ ಇತರ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಇದರಿಂದಾಗಿ ನೀರುಗಂಟಿಗಳು ಕಿರಿಕಿರಿ ಅನುಭವಿಸುವಂತೆ ಆಗಿದೆ.

 

 

ದೂರವಾಗದ ಭಯ: ಕಾಲು ದೊರೆತ ನಂತರ ಚನ್ನಪಟ್ಟಣ ನಗರದ ಬಹುತೇಕ ಬಡಾವಣೆಗಳ ನಿವಾಸಿಗಳು ಮಾನಸಿಕವಾಗಿ ಕುಗ್ಗಿದ್ದರು. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುವುದು ಸೇರಿ ವಿವಿಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆತಂಕ ದೂರ ಮಾಡುವ ಪ್ರಯತ್ನ ಮಾಡಲಾಗಿತ್ತು. ಅಲ್ಲದೆ, ಈಗಲೂ ಟ್ಯಾಂಕರ್ ಮೂಲಕವೇ ನೀರು ಪೂರೈಕೆ ಮಾಡುತ್ತಿದ್ದರೂ ಜನರಲ್ಲಿ ಶವದ ಕಾಲು ಪತ್ತೆಯಾದ ಪ್ರಕರಣದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ.

ಲಭ್ಯ ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಕಾಲು ದೊರೆತ ಟ್ಯಾಂಕ್​ನ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳು ಲಭ್ಯವಾಗಿಲ್ಲ. ಟ್ಯಾಂಕ್​ನ ಸಮೀಪವೇ ನ್ಯಾಯಾಧೀಶರ ನಿವಾಸ ಸೇರಿ ಇತರ ಮೂರು ಕಡೆಗಳಲ್ಲಿ ಇದ್ದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ ಹೊರತಾಗಿಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು ದೊರೆತಿಲ್ಲ. ಇದು ಪೊಲೀಸರು ನಿದ್ದೆಗೆಡುವಂತೆ ಮಾಡಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ