Breaking News
Home / ರಾಜಕೀಯ / ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ; ಉ.ಪ್ರದೇಶ ಹಿಂಸಾಚಾರಕ್ಕೆ ರಾಹುಲ್ ಟೀಕೆ

ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ; ಉ.ಪ್ರದೇಶ ಹಿಂಸಾಚಾರಕ್ಕೆ ರಾಹುಲ್ ಟೀಕೆ

Spread the love

ನವದೆಹಲಿ, ಅಕ್ಟೋಬರ್ 04: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಸಾವನ್ನಪ್ಪಿರುವ ಕುರಿತು ಆಡಳಿತ ಪಕ್ಷವನ್ನು ಟೀಕಿಸಿರುವ ಅವರು, ‘ಈ ಘಟನೆ ಬಗ್ಗೆ ಮೌನ ತಾಳಿರುವವರು ಈಗಾಗಲೇ ಸತ್ತಿದ್ದಾರೆ’ ಎಂದು ಕಟುವಾಗಿ ನುಡಿದಿದ್ದಾರೆ.

ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದ ಹಿಂಸಾಚಾರವನ್ನು ‘ಅಮಾನವೀಯ ಹತ್ಯಾಕಾಂಡ’ ಎಂದು ಟ್ವೀಟ್ ಮಾಡಿರುವ ಅವರು, ‘ಈ ಅಮಾನವೀಯ ಹತ್ಯಾಕಾಂಡವನ್ನು ನೋಡಿದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ ಎಂದರ್ಥ. ಆದರೆ ನಾವು ಈ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಕಿಸಾನ್ ಸತ್ಯಾಗ್ರಹ ಜಿಂದಾಬಾದ್!# ರೈತರ ಪ್ರತಿಭಟನೆ’ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಹತ್ತು ತಿಂಗಳಿನಿಂದ ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಭಾನುವಾರ ಉತ್ತರ ಪ್ರದೇಶದಲ್ಲಿ ಇಬ್ಬರು ಸಚಿವರ ಭೇಟಿಗೆ ಮುಂದಾಗಿದ್ದಾರೆ. ಈ ಸಂದರ್ಭ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾನಿರತರ ಮೇಲೆಯೇ ಕಾರು ಹರಿದಿದ್ದು, ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡಿದೆ. ಜನರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್‌ ನಾಯಕ ರಣ್‌ದೀಪ್‌ ಸುರ್ಜೇವಾಲಾ, ಕಪಿಲ್‌ ಸಿಬಲ್, ರಾಹುಲ್‌ ಗಾಂಧಿ ಮೊದಲಾದವರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದು, ‘ದೇಶದ ರೈತರನ್ನು ಬಿಜೆಪಿ ಎಷ್ಟು ದ್ವೇಷಿಸುತ್ತದೆ? ಅವರಿಗೆ ಬದುಕುವ ಹಕ್ಕು ಇಲ್ಲವೇ? ಅವರು ತಮ್ಮ ದನಿ ಎತ್ತಿದರೆ, ಅವರನ್ನು ಗುಂಡಿಕ್ಕಿ ಕೊಲ್ಲುತ್ತಾರೆಯೇ? ಅವರ ಮೇಲೆ ಕಾರು ಹಾರಿಸುತ್ತಾರೆಯೇ? ಸಾಕು. ಇದು ರೈತರ ದೇಶ, ಬಿಜೆಪಿಯ ಕ್ರೂರ ಸಿದ್ಧಾಂತದ ಉಗ್ರವಾದವಲ್ಲ. ಕಿಸಾನ್ ಸತ್ಯಾಗ್ರಹವನ್ನು ಇನ್ನಷ್ಟು ಬಲಪಡಿಸಲಾಗುತ್ತದೆ ಹಾಗೂ ರೈತರ ದನಿ ಇನ್ನಷ್ಟು ಗಟ್ಟಿಯಾಗಲಿದೆ’ ಎಂದಿದ್ದಾರೆ. ಪ್ರಿಯಾಂಕ ಗಾಂಧಿ ವಾದ್ರಾ ಸ್ಥಳಕ್ಕೆ ತೆರಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಘಟನೆಯ ಸಂದರ್ಭ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್‌ ಮಿಶ್ರಾರ ಪುತ್ರ ಇದ್ದರು ಎಂಬ ಆರೋಪ ಕೇಳಿಬಂದಿದ್ದು, ಸಚಿವರು ಇದನ್ನು ನಿರಾಕರಿಸಿದ್ದಾರೆ.

“ನಮ್ಮ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಈ ಸಂದರ್ಭದಲ್ಲಿ ಚಾಲಕನಿಗೆ ಗಾಯವಾಗಿದೆ. ಹಾಗಾಗಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಈ ಬಳಿಕ ಮೂವರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಘಟನೆಯ ಬೆನ್ನಲ್ಲೇ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಹಾಗೂ ಸಂಯುಕ್ತ ಕಿಸಾನ್‌ ಮೋರ್ಚಾ ಕೇಂದ್ರ ರಾಜ್ಯ ಸಚಿವ ಅಜಯ್‌ ಮಿಶ್ರಾರ ಮಗ ಆಶೀಶ್‌ ವಿರುದ್ದ ಎಫ್‌ಐಆರ್‌ ದಾಖಲು ಮಾಡುವಂತೆ ಆಗ್ರಹ ಮಾಡಿದ್ದಾರೆ. ಸೋಮವಾರ ಬೆಳಿಗ್ಗೆ ಆಶೀಶ್‌ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ