ಬಾಗಲಕೋಟೆ: ಅಧಿವೇಶನದಲ್ಲಿ ಜಾತಿ ಸಮೀಕ್ಷೆ ಚರ್ಚೆ ಮಾಡಿಲ್ಲ. ಆದರೆ ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಜಾರಿ ಸಮೀಕ್ಷೆ ವಿರುದ್ಧ ಚರ್ಚೆ ಮಾಡಲು ಸದನದಲ್ಲಿ ನೋಟಿಸ್ ಕೊಟ್ಟಿದೆ, ಅದು ಚರ್ಚೆಗೆ ಬರಲಿಲ್ಲ. ಅನೇಕ ವಿಚಾರಗಳ ಬಗ್ಗೆ ನೋಟಿಸ್ ಕೊಟ್ಟಿದ್ದೆ ಬರಲಿಲ್ಲ. ಶಿಕ್ಷಣ ನೀತಿ, ಯುಕೆಪಿ (ಕೃಷ್ಣ ಮೇಲ್ಡಂಡೆ ಯೋಜನೆ) ಬಗ್ಗೆ ಕೊಟ್ಟಿದ್ದೆ ಚರ್ಚೆಗೆ ಬರಲಿಲ್ಲ. ಡಿಸೆಂಬರ್ ತಿಂಗಳಲ್ಲಿ ಕರೆಯೋ ಅಧಿವೇಶನದಲ್ಲಿ ಮಾತನಾಡಬೇಕು. ಬಹಳಷ್ಟು ವಿಚಾರಗಳಿದ್ದಾವೆ.
6 ತಿಂಗಳು ಆದ ಮೇಲೆ ಅಧಿವೇಶನ ಕರೆದಿದ್ದೀರಿ.. ಅದ್ದರಿಂದ ಅಧಿವೇಶನ 15 ದಿನ ಮುಂದಕ್ಕೆ ಹಾಕಿ ಎಂದಿದ್ದೆ. ಸ್ಪೀಕರ್, ಸಿಎಂಗೆ ಹೇಳಿದ್ದೆ ಅವರು ಒಪ್ಪಲಿಲ್ಲ. ಅದಕ್ಕೆ ಧರಣಾ ಮಾಡಿದೆ. ಬಿಜೆಪಿಯವರಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಜನರ ಸಮಸ್ಯೆಗಳನ್ನ ಚರ್ಚೆ ಮಾಡಲು ಇಷ್ಟ ಇಲ್ಲ. ಅವರು ತಪ್ಪು ಮಾಡಿದ್ದಾರಲ್ಲ, ಸಿಕ್ಕು ಹಾಕೋತ್ತಾರೆ ಅಂತ ಅಧಿವೇಶನ ಮುಂದುವರಿಸಲಿಲ್ಲ. ಇದಕ್ಕಾಗಿ ಪತ್ರ ಬರೆದೇ, ಗಲಾಟೆ ಮಾಡಿದೆ, ಧರಣಾ ಮಾಡಿದೆ ಆದ್ರೂ ಕೂಡ ಒಪ್ಪಲಿಲ್ಲ.. ಏನು ಮಾಡೋದು ಹೇಳಪ್ಪಾ ಅಂತ ಮಾಧ್ಯಮಗಳನ್ನೇ ಪ್ರಶ್ನೆ ಮಾಡಿದರು.
ಇದೇ ವೇಳೆ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಿ ಬಿಜೆಪಿ, ಜೆಡಿಎಸ್ ನಾಯಕರು ಮಾತನಾಡುತ್ತಿದ್ದರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಯಾವಾಗಲೂ ರಾಜಕೀಯವಾಗಿ ಯಾರಿಗೆ ಶಕ್ತಿ ಇದೆ ಅವರ ಮೇಲೆ ಅಟ್ಯಾಕ್ ಮಾಡೋದು ಜಾಸ್ತಿ. ವೀಕ್ ಆಗಿರೋರ ಮೇಲೆ ಯಾಕೆ ಮಾಡ್ತಾರೆ. ಬಿಜೆಪಿಯವರು, ಜೆಡಿಎಸ್ ನವರು ನನ್ನ ಮೇಲೆ ಅಟ್ಯಾಕ್ ಮಾಡ್ತಾರೆ. ಏನು ಮಾಡೋಕಾಗಲ್ಲ. ಐ ವಿಲ್ ಫೇಸ್ ದೆಮ್ ಎಂದರು.