ಹುಬ್ಬಳ್ಳಿ: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು (ಸೆ.27) ಭಾರತ್ ಬಂದ್ಗೆ (Bharat Bandh) ಕರೆಕೊಟ್ಟಿದ್ದಾರೆ. ಸದ್ಯ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಬಂದ್ಗೆ ಬೆಂಬಲ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯಿ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕೊವಿಡ್ನಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈಗಷ್ಟೇ ವ್ಯಾಪಾರ, ವ್ಯವಹಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರಿಗೆ ತೊಂದರೆ ಮಾಡಬಾರದು ಅಂತ ಹೇಳಿದ್ದಾರೆ. ಕಾಂಗ್ರೆಸ್ ಗುಲಾಮಗಿರಿಯ ಪಕ್ಷ. ಹೀಗಾಗಿ ಅವರಿಗೆ ದೇಶಭಕ್ತಿಯಲ್ಲಿಯೂ ತಪ್ಪು ಕಾಣುತ್ತದೆ. ನಮ್ಮದು ದೇಶಭಕ್ತಿಯ ಪಕ್ಷ. ಸಿದ್ದರಾಮಯ್ಯ ಒಬ್ಬ ಮಾಜಿ ಮುಖ್ಯಮಂತ್ರಿ, ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ ಅಂತ ಹುಬ್ಬಳ್ಳಿಯಲ್ಲಿ ಸಿಎಂ ಅಭಿಪ್ರಾಯಪಟ್ಟರು.
ಹುಬ್ಬಳ್ಳಿಗೆ ಭೇಟಿ ನೀಡಿರುವ ಸಿಎಂ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಕೆಎಲ್ಇ ಟೆಕ್ ಪಾರ್ಕ್ನ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಸಿಎಂ ಬೊಮ್ಮಾಯಿಗೆ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಾಥ್ ನೀಡಿದ್ದಾರೆ. ಕೆಎಲ್ಇ ಕಾಲೇಜಿನಲ್ಲಿ ಬೊಮ್ಮಾಯಿ ಮತ್ತು ನಿರಾಣಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದರು. ತಾವು ಕಲಿತ ಕಾಲೇಜಿನ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದಾರೆ.
ಭಾರತ್ ಬಂದ್ಗೆ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ವಾಣಿಜ್ಯ ನಗರಿಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿವೆ. ನಗರ ಸಾರಿಗೆ, ಆಟೋ ಮತ್ತು ವಾಯುವ್ಯ ಸಾರಿಗೆ ಎಂದಿನಂತೆ ಸಂಚಾರ ನಡೆಸುತ್ತಿವೆ. ಹೋಟೆಲ್, ಶಾಲಾ- ಕಾಲೇಜು, ಮಾರುಕಟ್ಟೆ, ಸಗಟು ವಾಣಿಜ್ಯ ವಹಿವಾಟು ಎಲ್ಲವೂ ತೆರೆದಿವೆ. ಬಂದ್ ಪರವಾಗಿ ಸಾಂಕೇತಿಕವಾಗಿ ಕೆಲ ಸಂಘಟನೆಗಳಿಂದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದೆ.