Breaking News

E- KYC: ಸರ್ವರ್ ಸಮಸ್ಯೆಯಿಂದಾಗಿ ಪಡಿತರದಾರರ ‘ರೇಷನ್’ಗೆ ಕಿರಿಕಿರಿ!

Spread the love

ಕಾರವಾರ, ಸೆಪ್ಟೆಂಬರ್ 4: ಪಡಿತರ ಪಡೆದುಕೊಳ್ಳಲು ರೇಷನ್ ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರು ಕಡ್ಡಾಯವಾಗಿ ಇ- ಕೆವೈಸಿ ಮಾಡಿಸಬೇಕೆಂದು ರಾಜ್ಯ ಸರಕಾರದ ಆಹಾರ ಇಲಾಖೆ ಆದೇಶಿಸಿದೆ. ಅದರಂತೆ ಬಹುತೇಕ ತಾಲೂಕುಗಳ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಕಾರ್ಯಾರಂಭಗೊಂಡು ಒಂದು ವಾರ ಕಳೆದಿದೆ. ಆದರೆ ಹಲವೆಡೆ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರು ಇ- ಕೆವೈಸಿಗೆ ಪರದಾಡುವಂತಾಗಿದೆ. ದಿನಗಟ್ಟಲೆ ಕಾದರೂ ನೋಂದಣಿ ಕಷ್ಟ- ಸಾಧ್ಯವಾಗಿದೆ.

ಇ- ಕೆವೈಸಿ ಮಾಡಲು ಬಯೋಮೆಟ್ರಿಕ್ ನೀಡಬೇಕಿದೆ. ಸರ್ವರ್ ಸಮಸ್ಯೆಯಿಂದ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವುದು ಕಷ್ಟ ಸಾಧ್ಯವಾಗಿ ಪರಿಣಮಿಸಿದೆ ಎಂಬ ದೂರುಗಳು ಕೇಳಿಬಂದಿವೆ. ಇನ್ನು ಕೋವಿಡ್‌ನಿಂದ ಕೆಲಸ ಕಳೆದುಕೊಳ್ಳುತ್ತಿರುವ ಜನರು ಒಂದು ಕಡೆಯಾದರೆ, ಅತ್ತ ಇ- ಕೆವೈಸಿಯಿಂದ ಇನ್ನೊಂದು ಕಡೆ ಸಮಸ್ಯೆ ಎದುರಿಸಬೇಕಾಗಿದೆ.

ರಾಜ್ಯ ಸರಕಾರ ಹಾಗೂ ಆಹಾರ ಇಲಾಖೆಯ ಈ ಕ್ರಮಕ್ಕೆ ಪಡಿತರದಾರರು, ಜನರು ಹಿಡಿಶಾಪ ಹಾಕುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೋವಿಡ್ ಕಡ್ಡಾಯ ಮಾರ್ಗಸೂಚಿಯನ್ನು ಇ- ಕೆವೈಸಿ ಸಂದರ್ಭದಲ್ಲಿ ಪರೋಕ್ಷವಾಗಿ ಆಹಾರ ಇಲಾಖೆ, ತಾಲೂಕಾಡಳಿತವೇ ಉಲ್ಲಂಘಿಸಲು ದಾರಿ ಮಾಡಿದಂತಾಗಿದೆ. ‘ಒನ್ ನೇಷನ್- ಒನ್ ರೇಷನ್ ಕಾರ್ಡ್’ ಯೋಜನೆ ಅನ್ವಯ ಪಡಿತರ ಚೀಟಿ ದೃಢೀಕರಣಕ್ಕಾಗಿ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ನ್ಯಾಯಬೆಲೆ ಅಂಗಡಿಗಳ ಎದುರು ದಿನಗಟ್ಟಲೆ ಕಾದರೂ ಸರ್ವರ್ ಸಮಸ್ಯೆಯಿಂದ ಇ- ಕೆವೈಸಿ ಅಪ್‌ಡೇಟ್ ಮಾಡಲು ಅನೇಕ ಕಡೆಗಳಲ್ಲಿ ಸಾಧ್ಯವಾಗುತ್ತಿಲ್ಲ.

ದಿನದ ದುಡಿಮೆಯನ್ನು ಬಿಟ್ಟು ಕೂಲಿ ಕಾರ್ಮಿಕರು, ಬಡವರು ನ್ಯಾಯಬೆಲೆ ಅಂಗಡಿಗಳ ಎದುರು ಇ- ಕೆವೈಸಿ ಮಾಡಿಸಲು ನಿಲ್ಲುವಂತಾಗಿದೆ. ಸೆಪ್ಟೆಂಬರ್ 10ರೊಳಗೆ ಪಡಿತರ ಚೀಟಿ ಇರುವ ಕುಟುಂಬದ ಎಲ್ಲ ಸದಸ್ಯರು ಬಯೋಮೆಟ್ರಿಕ್ ದೃಢೀಕರಣ ನೀಡಬೇಕಾಗಿರುವುದರಿಂದ ರೈತರು, ಮಹಿಳೆಯರು ಸೇರಿದಂತೆ ಎಲ್ಲರೂ ನ್ಯಾಯಬೆಲೆ ಅಂಗಡಿಗಳ ಬಳಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ. ಸರ್ವರ್, ನೆಟ್‌ವರ್ಕ್ ಸಮಸ್ಯೆ ಸರಿಪಡಿಸಿ ಇ- ಕೆವೈಸಿ ಮಾಡಿಸಲು ಸಮಯ ವಿಸ್ತರಿಸಬೇಕೆಂದೂ ಒತ್ತಾಯ ಕೇಳಿಬಂದಿದೆ.

ನೆಮ್ಮದಿ ಕಳೆದುಕೊಂಡ ನ್ಯಾಯಬೆಲೆ ಅಂಗಡಿಕಾರರು
ಇನ್ನು ಇ- ಕೆವೈಸಿ ಅಪ್‌ಡೇಟ್ ಮಾಡಬೇಕೆಂಬುದು ಪಡಿತರದಾರರ ಪಾಲಿಗೆ ಮುಳುವಾಗಿದ್ದರೆ, ನ್ಯಾಯಬೆಲೆ ಅಂಗಡಿಕಾರರ ನೆಮ್ಮದಿ ಹಾಳು ಮಾಡಿದೆ. ಪಡಿತರ ಚೀಟಿ ಹೊಂದಿರುವ ಪ್ರತಿಯೊಂದು ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರು ನ್ಯಾಯಬೆಲೆ ಅಂಗಡಿಯವರ ಲಾಗಿನ್‌ನಲ್ಲಿ ಉಚಿತವಾಗಿ ಇ- ಕೆವೈಸಿ ಅಪ್‌ಡೇಟ್ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ತಂತ್ರಾಂಶದಲ್ಲಿ ಇ- ಕೆವೈಸಿ ಮಾಡುವ ಸಂದರ್ಭದಲ್ಲಿ ದಿನವೂ ಸರ್ವರ್ ಕಿರಿಕಿರಿಯಿಂದ ಪಡಿತರದಾರರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ನೆಮ್ಮದಿ ಭಂಗವಾಗಿದೆ.

ಈ ಹಿಂದೆ ನಡೆಸಲಾದ ಇ- ಕೆವೈಸಿ ಕಾರ್ಯಕ್ಕೆ ಆಹಾರ ಇಲಾಖೆಯಿಂದ ನ್ಯಾಯಬೆಲೆ ಅಂಗಡಿಕಾರರಿಗೆ ಸಿಗಬೇಕಾದ ಇ- ಕೆವೈಸಿ ಸಂಬಳ ಇನ್ನೂ ನೀಡದೇ, ಈಗ ಮತ್ತೆ ಅವರೆಲ್ಲರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಕೋವಿಡ್‌ನಿಂದ ಸರಿಯಾದ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಕಾರರಿಗೆ ಮಾಸಿಕ ಸಂಬಳ ಪ್ರತಿ ತಿಂಗಳಿಗೆ ಸರಿಯಾಗಿ ನೀಡದೇ ಬೇಕಾಬಿಟ್ಟಿಯಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನು ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಆಯಾ ತಾಲೂಕಿನ ತಹಶೀಲ್ದಾರರು, ಆಹಾರ ನಿರೀಕ್ಷಕರ ಮೂಲಕ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಕಾರರಿಗೆ ಸರ್ವರ್ ಸಮಸ್ಯೆಯಿದ್ದರೂ ಇ- ಕೆವೈಸಿ ಮಾಡಲೇಬೇಕೆಂದು ಒತ್ತಡ ಹೇರುತ್ತಿದ್ದು, ನ್ಯಾಯಬೆಲೆ ಅಂಗಡಿಕಾರರು ಇದರಿಂದ ಮಾನಸಿಕವಾಗಿ ಕುಗ್ಗುವಂತಾಗಿದೆ. ತಿಂಗಳ ಪೂರ್ತಿ ಜನರಿಗೆ ಉಚಿತ ಅಕ್ಕಿ ವಿತರಣೆ ಜೊತೆಗೆ ಇ- ಕೆವೈಸಿ ಕಾರ್ಯ ನೀಡಿ ನ್ಯಾಯಬೆಲೆ ಅಂಗಡಿಕಾರರನ್ನು ತಮ್ಮ ಇಷ್ಟದಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂಬುದು ನ್ಯಾಯಬೆಲೆ ಅಂಗಡಿಕಾರರ ಬೇಸರವಾಗಿದೆ.

ಮರಳಿ ಸಿಎಸ್‌ಸಿಗಳಿಗೆ ಜವಾಬ್ದಾರಿ ವಹಿಸಿ
ಈ ಹಿಂದೆ ಇ- ಕೆವೈಸಿ ಕಾರ್ಯವನ್ನು ತಾಲೂಕಿನ ಎಲ್ಲಾ ಸಿಎಸ್‌ಸಿ ಸೆಂಟರ್‌ಗೆ ನೀಡಿದ್ದು, ಅದರಂತೆ ಈಗಲೂ ನೀಡಿದ್ದಲ್ಲಿ ಬಹುಬೇಗನೆ ಇ- ಕೆವೈಸಿ ಕಾರ್ಯವೂ ನಡೆಯಲಿದೆ ಎಂಬ ಅಭಿಪ್ರಾಯವು ಕೇಳಿ ಬಂದಿದೆ. ಸಿಎಸ್‌ಸಿ ಸೆಂಟರ್‌ನಲ್ಲಿ ಪ್ರತಿಯೊಬ್ಬರಿಂದ ಹಣ ಪಡೆದುಕೊಳ್ಳಲಿದ್ದಾರೆ. ಆದರೆ ಸರಕಾರ ಹಾಗೂ ಇಲಾಖೆಯು ಇ- ಕೆವೈಸಿ ಮಾಡಿದ ಯಾವೊಂದು ನ್ಯಾಯಬೆಲೆ ಅಂಗಡಿಕಾರರಿಗೆ ಇನ್ನು ತನಕ ಇ- ಕೆವೈಸಿ ಕೆಲಸ ಮಾಡಿದಕ್ಕೆ ಹಣವನ್ನು ನೀಡದೇ ಕೇವಲ ಧರ್ಮಕ್ಕೆ ಬಿಟ್ಟಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ ಎಂಬುದು ನ್ಯಾಯಬೆಲೆ ಅಂಗಡಿಕಾರರ ಆರೋಪವಾಗಿದೆ.


Spread the love

About Laxminews 24x7

Check Also

ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಅವಳಿನಗರದಲ್ಲಿನ 400 ಡ್ರಗ್ ಪೆಡ್ಲರ್ಸ್ ಹಾಗೂ ಸೇವನೆ ಮಾಡುವವರ ಪರೇಡ್

Spread the love ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ