ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಳೆದ ಮಂಗಳವಾರ ನಡೆದ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಓರ್ವ ಬಾಲಾಪರಾಧಿ ಸೇರಿ ಐವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದರು.
ಮೈಸೂರಿನಲ್ಲಿ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಆರೋಪಿಗಳ ಪತ್ತೆಗೆ ಪೊಲೀಸರ ಏಳು ತಂಡ ರಚಿಸಲಾಗಿತ್ತು. ಆರೋಪಿಗಳು ಎಲ್ಲರೂ ತಮಿಳುನಾಡಿನ ತಿರುಪುರ್ ದವರು, ಅವರೆಲ್ಲಾ ಕೂಲಿ ಕಾರ್ಮಿಕರಾಗಿದ್ದಾರೆ. ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳಿದ್ದು, ಇದುವರೆಗೆ ಐವರನ್ನು ಬಂಧಿಸಲಾಗಿದೆ. ಬಂಧಿತ ಐವರಲ್ಲಿ ಒಬ್ಬರು ಬಾಲಾಪರಾಧಿಯಾಗಿದ್ದು, ಆತ 17 ವರ್ಷದವನು ಎಂದು ಪ್ರವೀಣ್ ಸೂದ್ ಹೇಳಿದರು.
ಇವರು ಕೆಲವು ಬಾರಿ ಮೈಸೂರಿಗೆ ಬಂದು ಹೋಗುತ್ತಿದ್ದರು. ವಾಪಸ್ ಹೋಗುವಾಗ ಪಾರ್ಟಿ ಮಾಡಿ ಹೋಗುತ್ತಿದ್ದರು. ಘಟನೆ ನಡೆದ ಸ್ಥಳದಲ್ಲಿ ಈ ಐವರು ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದರು. ಬಂಧಿತರಲ್ಲಿ ಕೆಲವರು ಕ್ರಿಮಿನಲ್ ಹಿನ್ನಲೆ ಉಳ್ಳವರು ಇದ್ದಾರೆ ಎಂದರು.
ಸಂತ್ರಸ್ತೆಯಿಂದ ಒಂದು ಶಬ್ಧವೂ ಮಾಹಿತಿ ಸಿಕ್ಕಿಲ್ಲ. ಇದು ಈ ಪ್ರಕರಣದ ವಿಶೇಷ. ಆಕೆಯ ಸ್ನೇಹಿತ ಕೆಲವು ಮಾಹಿತಿ ನೀಡಿದರು. ಅದೂ ಅಪೂರ್ಣ. ಟೆಕ್ನಿಕಲ್, ಸೈಂಟಿಫಿಕ್ ಸಾಕ್ಷ್ಯ ಗಳ ಮೂಲಕ ಪ್ರಕರಣವನ್ನು ಭೇದಿಸಲಾಗುತ್ತದೆ ಎಂದರು.
ಆರೋಪಿಗಳ ಪತ್ತೆ ಮಾಡಿದ ತಂಡಕ್ಕೆ 5 ಲಕ್ಷ ರೂ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Laxmi News 24×7