Breaking News

ಕೋವಿಡ್‌ ಮೂರನೇ ಅಲೆ ನಿರೀಕ್ಷೆ ಸದ್ಯಕ್ಕೆ ಇಲ್ಲ: ಡಿ. ರಂದೀಪ್‌

Spread the love

ಬೆಂಗಳೂರು: ‘ಮೂರನೇ ಅಲೆ ಬಂದರೆ, ಅದು ಕೊರೋನಾ ವೈರಾಣುವಿನ ಹೊಸ ರೂಪಾಂತರ ತಳಿಯಿಂದ ಎಂದು ತಜ್ಞರು ತಿಳಿಸಿದ್ದಾರೆ. ಉದಾಹರಣೆಗೆ ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್‌ ತಳಿಯಿಂದ ಸೋಂಕು ಹರಡುವಿಕೆ ಹೆಚ್ಚಾದರೆ ಅದು ಮೂರನೇ ಅಲೆ ಎಂದರ್ಥ. ಸದ್ಯಕ್ಕೆ ಕೊರೋನಾ ಮೂರನೇ ಅಲೆಯ ನಿರೀಕ್ಷೆ ಇಲ್ಲ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಎಲ್ಲ ವಲಯಗಳಲ್ಲಿ ಕೋವಿಡ್‌ ಪರೀಕ್ಷೆಗೆ ಬಂದ ಶೇ 10ರಷ್ಟು ಮಾದರಿಗಳನ್ನು ವೈರಾಣುವಿನ ರೂಪಾಂತರಿ ತಳಿ ಪತ್ತೆ ಹಚ್ಚುವ ಸಲುವಾಗಿ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸುತ್ತಿದ್ದೇವೆ. ಈ ವೇಳೆ ಶೇ 75ರಷ್ಟು ವೈರಾಣುವಿನ ಡೆಲ್ಟಾ ರೂಪಾಂತರಿ ಕಂಡುಬಂದಿದೆ. ಡೆಲ್ಟಾ ಪ್ಲಸ್‌ ರೂಪಾಂತರಿ ಮೂರು ಪ್ರಕರಣದಲ್ಲಿ ಮಾತ್ರ ಲಭಿಸಿದೆ. ಇದರ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದರೆ ಮೂರನೇ ಅಲೆ ಕಾಣಿಸಿಕೊಂಡಿದೆ ಎನ್ನಬಹುದು. ‌ಸದ್ಯಕ್ಕೆ ಮೂರನೇ ಅಲೆ ಶುರುವಾಗಿದೆ ಎನ್ನಲು ಯಾವುದೇ ಆಧಾರವಿಲ್ಲ’ ಎಂದು ವಿವರಿಸಿದರು.

‘ಕೋವಿಡ್‌ ಮೂರನೇ ಅಲೆ ಕಾಣಿಸಿಕೊಳ್ಳುವ ಸಮಯದ ಬಗ್ಗೆ ಖಚಿತತೆ ಇಲ್ಲ. ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಕಂಡುಬರಬಹುದು ಅಥವಾ ಸೆಪ್ಟೆಂಬರ್‌ ಅಂತ್ಯದಲ್ಲೂ ಕಾಣಿಸಿಕೊಳ್ಳಬಹುದು. ನಾವು ಅದರ ಬದಲು ಸನ್ನದ್ಧತೆಗೆ ಗಮನ ಕೇಂದ್ರೀಕರಿದ್ದೇವೆ. ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಎಷ್ಟು ಹಾಸಿಗೆ ಲಭ್ಯವಿದೆ, ಸಾಮಾನ್ಯ ಹಾಸಿಗೆಗಳು ಎಷ್ಟಿವೆ, ಆಮ್ಲಜನಕ ಪೂರೈಕೆ ವ್ಯವಸ್ಥೆ ಹೊಂದಿರುವ ಹಾಸಿಗೆಗಳು ಎಷ್ಟಿವೆ, ನಮ್ಮದೇ ಆದ ಹೊಸ ಸೌಕರ್ಯಗಳಲ್ಲಿ ಹಾಸಿಗೆಗಳು ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳು ಸನ್ನದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದರು.

‘ಚಿಕಿತ್ಸೆಗೆ 700 ಐಸಿಯು ಲಭ್ಯ’

‘ಬಿಬಿಎಂಪಿಯ ಜೆಜೆಆರ್‌ ಆಸ್ಪತ್ರೆ, ಗೋವಿಂದರಾಜ ನಗರದ ಸಂಗೊಳ್ಳಿ ರಾಯಣ್ಣ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಐಸಿಯು ವ್ಯವಸ್ಥೆ ಕಲ್ಪಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 700 ಐಸಿಯು ಲಭ್ಯವಿದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಕೊಡಿಸಿದರೆ ಐಸಿಯುವಿನ ಅಗತ್ಯವೇ ಬೀಳುವುದಿಲ್ಲ’ ಎಂದು ರಂದೀಪ್‌ ಹೇಳಿದರು.

‘ಎರಡನೇ ಅಲೆಯಲ್ಲಿ ಕೆಲವರು ಎಂಟು- ಒಂಬತ್ತು ದಿನಗಳ ಬಳಿಕ ಆರೋಗ್ಯ ಬಿಗಡಾಯಿಸಿ ನೇರವಾಗಿ ಆಸ್ಪತ್ರೆಗೆ ಬಂದರು. ಅವರ ಚಿಕಿತ್ಸೆಗೆ ವೆಂಟಿಲೇಟರ್‌ಗಳನ್ನು ಏಕಾಏಕಿ ಸಜ್ಜುಗೊಳಿಸಲು ಸಾಧ್ಯವಾಗದೇ ಸಾವಿನ ಸಂಖ್ಯೆ ಹೆಚ್ಚಾಯಿತು. ಸೋಂಕಿತರು ತಡವಾಗಿ ಅಥವಾ ಪರಿಸ್ಥಿತಿ ಕೈ ಮೀರಿದ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ಕ್ರಮ ಕೈಗೊಂಡಿದ್ದೇವೆ. ಈಗ ಹೆಚ್ಚಿನವರು ಕೋವಿಡ್‌ ಲಸಿಕೆ ಪಡೆದಿದ್ದಾರೆ. ಸೋಂಕಿತರಿಗೆ ಚಿಕಿತ್ಸೆಯ ಅಗತ್ಯತೆ ನಿರ್ಧರಿಸಲು ಭೌತಿಕವಾಗಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ವೈದ್ಯರು ಸೋಂಕಿತರು ಇರುವಲ್ಲಿಗೇ ತೆರಳಿ, ಅವರು ಮನೆ ಚಿಕಿತ್ಸೆಗೆ ಅರ್ಹರೇ, ಅವರಿಗೆ ಇತರ ರೋಗವಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಹಾಗಾಗಿ ಮೂರನೇ ಅಲೆಯು ಎರಡನೇ ಅಲೆಯಷ್ಟು ತೀವ್ರವಾಗಿ ಇರಲಿಕ್ಕಿಲ್ಲ’ ಎಂದರು.

ಕೋವಿಡ್‌ ಎರಡನೇ ಅಲೆಯಲ್ಲಿ ದಿನದಲ್ಲಿ ಗರಿಷ್ಠ 23 ಸಾವಿರ ಪ್ರಕರಣಗಳು ಕಾಣಿಸಿಕೊಂಡಿದ್ದವು. ಈಗಲೂ ಅಷ್ಟೇ ಪ್ರಕರಣಗಳು ಕಂಡುಬಂದರೂ ಎದುರಿಸುವಷ್ಟು ಸನ್ನದ್ಧತೆ ಮಾಡಿಕೊಂಡಿದ್ದೇವೆ.


Spread the love

About Laxminews 24x7

Check Also

ನಿರ್ದೇಶಕ ಯೋಗರಾಜ್ ಭಟ್ ಮೇಲೆ ಎಫ್​ಐಆರ್

Spread the love ಕಳೆದ ಕೆಲವು ದಿನಗಳಿಂದ ‘ಮನದ ಕಡಲು’ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿತ್ತು. 30 ಅಡಿ ಎತ್ತರದಲ್ಲಿದ್ದ ಲೈಟ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ