Breaking News

ಭದ್ರಾ ಮೇಲ್ದಂಡೆ ಶೀಘ್ರದಲ್ಲೇ ರಾಷ್ಟ್ರೀಯ ಯೋಜನೆಯಾಗಲಿದೆ: ಗೋವಿಂದ ಕಾರಜೋಳ

Spread the love

ಚಿತ್ರದುರ್ಗ, ಆಗಸ್ಟ್ 14: “ಮಧ್ಯ ಕರ್ನಾಟಕದ ಬಹು ನಿರೀಕ್ಷಿತ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ,” ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಬೆಂಗಳೂರಿನಿಂದ ದಾವಣಗೆರೆಗೆ ಹೋಗುವ ಮಾರ್ಗ ಮಧ್ಯೆ ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಆಗಬೇಕು ಎನ್ನುವುದು ನಿಮ್ಮ ಆಸೆ ಹಾಗೂ ಜನರ ಕನಸಾಗಿದೆ,” ಎಂದರು.

“ಈಗಾಗಲೇ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳ ವೀಕ್ಷಣೆ ಮಾಡುವುದಕ್ಕೆ ಹಾಗೂ ಟೆಕ್ನಿಕಲ್ ಪಿಜಿಬಲಿಟಿ ಅಧ್ಯಯನ ಮಾಡುವುದಕ್ಕೆ ಕೇಂದ್ರದ ತಂಡವನ್ನು ಕಳುಹಿಸಲಾಗಿತ್ತು. ಅವರು ಬಂದು ವೀಕ್ಷಣೆ ಮಾಡಿ ಹೋಗಿದ್ದಾರೆ,” ಎಂದು ಬೃಹತ್ ನೀರಾವರಿ ಸಚಿವರೂ ಆಗಿರುವ ಗೋವಿಂದ ಕಾರಜೋಳ ತಿಳಿಸಿದರು.

“ಕೇಂದ್ರ ಸರ್ಕಾರದ ಹಂತದಲ್ಲಿ ಈಗಾಗಲೇ ಸಭೆಗಳಾಗಿ ಈ ಯೋಜನೆಯನ್ನು “ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವುದಕ್ಕೆ ತಾತ್ವಿಕ ಒಪ್ಪಿಗೆ ಆಗಿದೆ. ಇನ್ನೊಂದು ಸಭೆ ನಡೆಯಬೇಕಿದೆ. ಭಾರತ ಸರ್ಕಾರದ ಜಲಶಕ್ತಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆಯಲಿದ್ದು, ತದನಂತರ ಕೇಂದ್ರ ಸಚಿವ ಸಂಪುಟಕ್ಕೆ ಬಂದು ಅದಕ್ಕೆ ಅನುಮೋದನೆ ಸಿಗಲಿದೆ,” ಎಂದು ತಿಳಿಸಿದರು.

“ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸರಿಸುಮಾರು 4700 ಹೆಚ್ಚು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ,” ಎಂದರು.

“ಚಿತ್ರದುರ್ಗ ಬರದ ಜಿಲ್ಲೆಯಾಗಿದ್ದು, ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ರೈತರ ಭೂಮಿಗೆ ನೀರು ಹರಿಸುವಂತದ್ದು ಮತ್ತು ಕುಡಿಯುವ ನೀರಿಗಾಗಿ ಹಾಹಾಕಾರ ಇರುವ ಪ್ರದೇಶಗಳಿಗೆ ನೀರು ಕೊಡುವ ವ್ಯವಸ್ಥೆ ಆಗುತ್ತದೆ, ಸ್ವಲ್ಪ ದಿನ ಕಾಯಬೇಕು,” ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

 

 

ಇನ್ನು ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವರು, “ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲಾಯಿಸುವ ಪ್ರಸ್ತಾವನೆ ನಮ್ಮ ಸರ್ಕಾರದಲ್ಲಾಗಲಿ ಅಥವಾ ಸಚಿವ ಸಂಪುಟದ ಮುಂದಾಗಲಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಂದಾಗ ಏನು ಹೇಳಬೇಕು ಆಗ ಹೇಳುತ್ತೇವೆ,” ಎಂದರು.

“ನಮ್ಮ ಬಿಜೆಪಿ ಸರ್ಕಾರದ ಯೋಜನೆಗಳು ಯಾವುದೇ ವ್ಯಕ್ತಿಗತವಾಗಿರದೆ ಅವು ರಾಷ್ಟ್ರೀಯ ಯೋಜನೆಗಳ ಗುರುತನ್ನು ಪಡೆದುಕೊಳ್ಳಬೇಕು. ಆ ರೀತಿಯ ಯೋಜನೆಗಳನ್ನು ರೂಪಿಸಬೇಕು ಎಂದರು. ಪ್ರಧಾನಮಂತ್ರಿ ಕೃಷಿ ಸಂಚಯನ ಯೋಜನೆ, ಪ್ರಧಾನಿಮಂತ್ರಿ ಆವಾಸ್ ಯೋಜನೆ,” ಎಂದು ಮಾಡಿದ್ದಾರೆ.

“ಯಾವುದೇ ಯೋಜನೆಗಳು ಸರ್ಕಾರದ ಹೆಸರಿಗೆ ಹೋಗಿರುತ್ತವೆ. ನಾವು ಬಹಳ ಹಳೇ ಕಾಲದಂತೆ ರಾಜ ಮಹಾರಾಜರ ಆಡಳಿತದ ರೀತಿಯಂತೆ ಮನೆತನದ ಹಾಗೂ ವ್ಯಕ್ತಿಗಳ ಹೆಸರು ಇಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ,” ಎಂದರು.

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಪ್ರತಿಕ್ರಿಯಿಸಿ, “ಸಿದ್ದರಾಮಯ್ಯ ಹಿರಿಯ ನಾಯಕರು. ಅವರು ನಿನ್ನೆ ತಾನೇ 74ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಮ್ಮೆಲ್ಲರ ಆಸೆಯಂತೆ ಸಿದ್ದರಾಮಯ್ಯ ನೂರು ವರ್ಷಗಳ ಕಾಲ ಆರೋಗ್ಯವಂತರಾಗಿ ನಗು ನಗುತ್ತಾ ಬದುಕಬೇಕು ಎಂದು ನಮ್ಮ ಆಸೆ. ಭಗವಂತ ಅವರಿಗೆ ಅಂಥದೊಂದು ಅವಕಾಶ ಕೊಡಲಿ ಎಂದು ಹಾರೈಸುತ್ತೇನೆ,” ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಯಡಿಯೂರಪ್ಪ ಸರ್ಕಾರದಲ್ಲಿ ಕೇಂದ್ರದ ಒಪ್ಪಿಗೆ

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಟ್ವೀಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದರು. ರಾಷ್ಟ್ರೀಯ ಯೋಜನೆ ಸ್ಥಾನಮಾನ ಪಡೆದ ರಾಜ್ಯದ ಮೊದಲ ಯೋಜನೆ ಭದ್ರ ಮೇಲ್ದಂಡೆ.

ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗುವ ಈ ಯೋಜನೆಗೆ 21,450 ಕೋಟಿ ರೂ. ವೆಚ್ಚವಾಲಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಯೋಜನೆಯಾದ ಕಾರಣ ಕೇಂದ್ರದಿಂದ 16,125 ಕೋಟಿ ಅನುದಾನ ಸಿಗಲಿದೆ.

ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ರಾಷ್ಟ್ರೀಯ ಯೋಜನೆ ಸ್ಥಾನಮಾನ ಪಡೆಯಬೇಕಾದರೆ ಹನಿ ನೀರಾವರಿ ಯೋಜನೆ ಅಡಿಯಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರಬೇಕು.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ