ಬೀದರ್: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಾದೇಶದಿಂದ ಬಂದ ಸರ್ಕಾರ ಇಲ್ಲ. ಹಣದ ಹೊಳೆ ಹರಿಸಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಲಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಭವಿಷ್ಯ ನುಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗದವರು. ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಸ್ಥಿರ ಸರ್ಕಾರ ಇರಬೇಕು ಎನ್ನುವದು ನಮ್ಮ ಇಚ್ಛೆ. ಆದರೆ ಸಂಪುಟದಲ್ಲಿ ಸಾಕಷ್ಟು ಜನರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ಇದೆ. ಅಷ್ಟೇ ಅಲ್ಲ ಮಂತ್ರಿಯಾದವರು ಖುಷಿಯಲ್ಲಿಲ್ಲ. ಅತೃಪ್ತಿ ಸಚಿವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸದ್ಯ ಬಿಜೆಪಿ ಒಡೆದ ಮನೆಯಾಗಿದೆ ಎಂದು ಟೀಕಿಸಿದರು.
ಕೇಂದ್ರ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದು, ಸ್ವರ್ಗವನ್ನು ಧರೆಗಿಳಿಸುತ್ತೇವೆ ಎಂದ ಬಿಜೆಪಿಯವರು ಇದೀಗ ನರಕ ಸೃಷ್ಟಿಸಿದ್ದಾರೆ. ತೈಲ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ. ರೈತರ ಆದಾಯ ದ್ವಿಗುಣ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಅವರು ರಸಗೊಬ್ಬರ, ಬಿತ್ತನೆ ಬೀಜ ದರ ಹೆಚ್ಚಿಸಿ ಸಾಗುವಳಿ ದುಪ್ಪಟ್ಟು ಮಾಡಿದ್ದಾರೆ ಎಂದು ಹೇಳಿದರು.