ಕಲಬುರಗಿ: ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಾನು ಬಿಜೆಪಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹುದ್ದೆಯನ್ನು ಹುಡುಕಿಕೊಂಡು ನಾನು ಹೋಗಲ್ಲ ಎಂದರು.
ಬೊಮ್ಮಾಯಿ ಸರ್ಕಾರದಲ್ಲೂ ನಾನು ಸಚಿವ ಸ್ಥಾನ, ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಆದರೆ, ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ ಎಂದರು.
ಯಡಿಯೂರಪ್ಪನವರು ತಾವು ರಾಜೀನಾಮೆ ನೀಡುವಾಗ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ನನಗೆ ಇನ್ನೂ ವಯಸ್ಸಿದೆ, ಸದ್ಯ ಪಕ್ಷದ ಸಂಘಟನೆ ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಸಚಿವ ಸ್ಥಾನ ಬಗ್ಗೆ ಅಸಮಾಧಾನ ವಿಚಾರವಾಗಿ ಪ್ರಕ್ರಿಯಿಸಿದ ಅವರು, ಸಿಎಂ ಎಲ್ಲರ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತಾರೆ. ಬಿಜೆಪಿಗೆ ಬಂದ ಹದಿನೇಳು ಶಾಸಕರಲ್ಲಿ ಆನಂದ ಸಿಂಗ್ ಮೊದಲಿಗರು. ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದರು.
ಕಲಬುರಗಿ, ಯಾದಗಿರಿ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕಿತ್ತು. ನಾನು ಕಲಬುರಗಿ ಅಳಿಯನಾಗಿ, ಈ ಭಾಗಕ್ಕೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ ಎಂದರು