Breaking News
Home / ರಾಜಕೀಯ / ಈ ಬಾರಿಯೂ ಸರಳ ದಸರಾ ಆಚರಣೆಗೆ ಚಿಂತನೆ: ಎಸ್.ಟಿ. ಸೋಮಶೇಖರ್

ಈ ಬಾರಿಯೂ ಸರಳ ದಸರಾ ಆಚರಣೆಗೆ ಚಿಂತನೆ: ಎಸ್.ಟಿ. ಸೋಮಶೇಖರ್

Spread the love

ಮೈಸೂರು, ಆಗಸ್ಟ್ 7: “ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿಯೂ ಸರಳವಾಗಿ ಆಚರಿಸಲು ಚಿಂತಿಸಲಾಗಿದೆ,” ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಸಹಕಾರ ಮತ್ತು ಮೈಸೂರು ಜಿಲ್ಲಾ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕು ಬಾವಲಿ ಚೆಕ್‌ಪೋಸ್ಟ್‌ ಪರಿಶೀಲನೆ ವೇಳೆ ದಸರಾ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ಸೋಮಶೇಖರ್ ಪ್ರತಿಕ್ರಿಯೆ ನೀಡಿದರು.

“ಈ ಬಾರಿಯೂ ಸರಳ ದಸರ ಆಚರಣೆಗೆ ರೂಪರೇಷೆಗಳನ್ನು ಸಿದ್ಧಪಡಿಸುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ರೂಪರೇಷೆ ಸಿದ್ಧವಾದ ನಂತರ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಹೇಳಿದರು.

“ಕಳೆದ ವರ್ಷ ದಸರಾ ಆಚರಣೆಗೆ 10 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆ ಪೈಕಿ 7.50 ಕೋಟಿ ರೂ. ಅನುದಾನ ಉಳಿದಿದೆ. ಈ ವರ್ಷದ ದಸರಾ ಆಚರಣೆಗೆ ಸರ್ಕಾರದ ಅನುಮೋದನೆ ಪಡೆದು, ಆ ಉಳಿಕೆ ಅನುದಾನ ಬಳಸಿಕೊಳ್ಳಲಾಗುವುದು,” ಎಂದು ಸಚಿವ ಸೋಮಶೇಖರ್ ತಿಳಿಸಿದರು.

 

 

“ಮೈಸೂರು ದಸರಾ ಮಹೋತ್ಸವವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ವರ್ಷವೂ ದಸರಾ ಆಚರಣೆ ಮಾಡಲಾಗುತ್ತದೆ,” ಎಂದರು.

ಕಳೆದ ವರ್ಷವೂ ಮೈಸೂರು ದಸರಾ ಮಹೋತ್ಸವವನ್ನು ಕೊರೊನಾ ಸೋಂಕಿನ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗಿತ್ತು. ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸರಳ ದಸರಾ ಆಚರಣೆಯನ್ನು ಅಚ್ಚುಕಟ್ಟಾಗಿ ನಿಭಾಯಯಿಸಿದ್ದರು.

ಈ ಬಾರಿ ಮೈಸೂರು ಜಿಲ್ಲಾಧಿಕಾರಿಯಾಗಿ ಬಗಾದಿ ಗೌತಮ್ ಇದ್ದು, ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಮೈಸೂರು ದಸರಾ ಆಚರಣೆಯನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

ಅದೇ ರೀತಿ ಕಳೆದ ವರ್ಷವೂ ಎಸ್.ಟಿ. ಸೋಮಶೇಖರ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ಬಾರಿಯೂ ಅವರೇ ಉಸ್ತುವಾರಿ ಸಚಿವರಾಗಲಿದ್ದಾರೆ ಎನ್ನಲಾಗಿದೆ.

ಇಂದು ಮೈಸೂರು ಜಿಲ್ಲೆಯ ಕೋವಿಡ್ ನಿಯಂತ್ರಣ ಸಭೆ ಮಾಡಿದ್ದು, ಕೋವಿಡ್ ನಿಯಂತ್ರಣಕ್ಕೆ ಕ್ರಮಗಳು, ಮೈಸೂರು ದಸರಾ ಆಚರಣೆ, ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಬಗ್ಗೆ ಎಚ್ಚರಿಕೆ ವಹಿಸುವುದೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಶುಕ್ರವಾರ ಸಚಿವರು ಹೇಳಿದ್ದೇನು?

“ಮೈಸೂರಿನಲ್ಲಿ ಕೋವಿಡ್ ಪ್ರಕರಣ ಸಂಬಂಧ ಶನಿವಾರ ಸಭೆ ಕರೆದಿದ್ದೇನೆ. ಪ್ರವಾಸಿ ತಾಣಗಳು ಸೇರಿದಂತೆ ಹೆಚ್ಚು ಮಂದಿ ಸೇರುವ ಸ್ಥಳಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು? ಕೋವಿಡ್ ಪ್ರಕರಣವನ್ನು ಹೇಗೆ ಹತೋಟಿಗೆ ತರಬಹುದು ಎಂಬಿತ್ಯಾದಿಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗುವುದು,” ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದರು.

ಮೈಸೂರು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, “ಕೋವಿಡ್ ನಿರ್ವಹಣೆ ಬಗ್ಗೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿಗಳನ್ನು ನಿಭಾಯಿಸಲು ಹಾಲಿ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ ವಹಿಸಿದ್ದಾರೆ. ನನಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಕ್ರಮವಹಿಸುತ್ತಿದ್ದೇನೆ,” ಎಂದಿದ್ದರು.

ಕಳೆದೊಂದು ವರ್ಷದಿಂದ ಕೋವಿಡ್ ಇದ್ದು, ಅದರ ಜೊತೆಗೆ ಜೀವನ ನಡೆಸಬೇಕಿದೆ. ಹೀಗಾಗಿ ಜನರಿಗೆ ಹಾಗೂ ವ್ಯಾಪಾರ ವಹಿವಾಟಿಗೆ ತೊಂದರೆಯಾಗದಂತೆ, ಸೋಂಕು ಹರಡದಂತೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ನಿಟ್ಟಿನಲ್ಲಿ ವಿವರವಾಗಿ ಚರ್ಚೆ ನಡೆಸಲಾಗುವುದು,” ಎಂದು ಸಚಿವ ಸೋಮಶೇಖರ್ ತಿಳಿಸಿದ್ದರು.

ಮೈಸೂರು ಜಿಲ್ಲೆಯ ಇಂದಿನ ಕೋವಿಡ್ ವಿವರ

ಮೈಸೂರು ಜಿಲ್ಲೆಯಲ್ಲಿ ಇಂದು (ಶನಿವಾರ) 141 ಹೊಸ ಕೋವಿಡ್ ಪ್ರಕರಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿಂದು ಒಬ್ಬ ಸೋಂಕಿತರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. 14 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 1,73,830ಕ್ಕೆ ಏರಿಕೆಯಾಗಿದೆ. ಈವರೆಗೆ 1,70,031 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 2324 ಸೋಂಕಿತರು ಮೃತರಾಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿ 1475 ಸಕ್ರಿಯ ಪ್ರಕರಣಗಳಿವೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ