ಪಣಜಿ : ಮಹಿಳೆಯ ಮೇಲೆ ನಡೆದಿರುವ ಲೈಂಗಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕೂಡಲೆ ರಾಜೀನಾಮೆ ನೀಡಬೇಕು ಎಂದು ರೆವಲ್ಯೂಶನ್ ಗೋವನ್ಸ್ ಒತ್ತಾಯಿಸಿದೆ.
ಪಕ್ಷದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೆವಲ್ಯೂಶನ್ ಗೋವನ್ಸ್ ನ ಸುನಯನಾ ಗಾವಡೆ, ಗೋವಾಕ್ಕೆ ಶಾಂತಿಪ್ರಿಯ ಎಂಬ ಗುರುತು ಬದಲಾಗುತ್ತಿದೆ. ಇದಕ್ಕೆ ಜನಪ್ರತಿನಿಧಿಗಳೇ ಕಾರಣ. ಗೋವಾ ರಾಜ್ಯವು ಯಾವಾಗ ಸುರಕ್ಷಿತವಾಗಲಿದೆ..? ರಾತ್ರಿಯ ಸಂದರ್ಭದಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರ ಬರವುದು ಅಪರಾಧವೇ…? ಎಂದು ಅವರು ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರನ್ನು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ರೆವಲ್ಯೂಶನ್ ಗೋವನ್ಸ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು, ಬೆನೌಲಿಮ್ ಬೀಚ್‌ನಲ್ಲಿ ಇತ್ತೀಚೆಗೆ ಇಬ್ಬರು ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸದನದಲ್ಲಿ ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿತ್ತು. ‘ಮಕ್ಕಳ ಸುರಕ್ಷತೆಯ ಜವಾಬ್ದಾರಿಯನ್ನು ಪೋಷಕರು ವಹಿಸಿಕೊಳ್ಳಬೇಕು. ವಿಶೇಷವಾಗಿ ಅಪ್ರಾಪ್ತ ವಯಸ್ಸಿನವರನ್ನು ರಾತ್ರಿಯಲ್ಲಿ ಹೊರಗೆ ಬಿಡಬಾರದು’ ಎಂದು ಹೇಳಿಕೆ ನೀಡಿದ್ದರು.
‘ಈ ದುರದೃಷ್ಟಕರ ಘಟನೆಯ ಬಗ್ಗೆ ಕುರಿತು ನೀಡಿದ್ದ ಹೇಳಿಕೆಯನ್ನು ನಾನು ಹಿಂದಕ್ಕೆ ಪಡೆಯುತ್ತೇನೆ. ಜವಾಬ್ದಾರಿಯುತ ಸರ್ಕಾರದ ಮುಖ್ಯಸ್ಥರಾಗಿ ಮತ್ತು 14 ವರ್ಷದ ಮಗಳ ತಂದೆಯಾಗಿ, ಈ ಘಟನೆಯ ಬಗ್ಗೆ ನಾನು ತೀವ್ರವಾಗಿ ನೋವು ಅನುಭವಿಸುತ್ತಿದ್ದೆ. ಆ ನೋವನ್ನು ವಿವರಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು.
ಕೋವಿಡ್ ಸಾಂಕ್ರಾಮಿಕದ ಹಿನ್ನೆಯಲ್ಲಿ ರಾಜ್ಯದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ಅಪ್ರಾಪ್ತ ಮಕ್ಕಳ ಕಾಳಜಿಯ ಜವಾಬ್ದಾರಿಯನ್ನು ಎಲ್ಲರೂ ಹಂಚಿಕೊಳ್ಳುವ ಬಗ್ಗೆ ನಾನು ಹೇಳಿಕೆ ನೀಡಿದ್ದೆ. ಈ ಹೇಳಿಕೆಯಲ್ಲಿ ನನ್ನಂತೆಯೇ ಮಕ್ಕಳನ್ನು ಹೊಂದಿರುವ ನಾಗರಿಕರು ಮತ್ತು ಮಕ್ಕಳ ಬಗೆಗಿನ ಪ್ರೀತಿ ಮತ್ತು ಕಾಳಜಿ ಇತ್ತೇ ಹೊರತು, ಬೇರೆ ಏನೂ ಇರಲಿಲ್ಲ’ ಎಂದು ವಿವರಿಸಿದ್ದರು.
Laxmi News 24×7