ಬೆಂಗಳೂರು: ಜವಾಬ್ದಾರಿಯುತ ಪ್ರತಿಪಕ್ಷವಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನಮ್ಮ ರಚನಾತ್ಮಕ ಸಹಕಾರದ ಭರವಸೆಯನ್ನು ನೀಡಲು ಬಯಸುತ್ತೇನೆ. ಇದೇ ರೀತಿಯ ಸಹಕಾರ ನಿಮ್ಮ ಪಕ್ಷದಿಂದಲೂ ನಿಮಗೆ ಸಿಗಲಿ ಎಂದು ಹಾರೈಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಪ್ರಮಾಣ ವಚನ ಸ್ವೀಕಾರದ ಮೂಲಕ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಅವಕಾಶವನ್ನು ಸಂವಿಧಾನ ಬದ್ದವಾಗಿ ಪಡೆದಿರುವ ಬಸವರಾಜ ಬೊಮ್ಮಾಯಿಯವರಿಗೆ ಹಾರ್ದಿಕ ಅಭಿನಂದನೆಗಳು. ಕಳೆದ 2 ವರ್ಷಗಳಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಎಸಗಿರುವುದು ಕೇಂದ್ರದಲ್ಲಿರುವ ನಿಮ್ಮದೇ ಪಕ್ಷದ ಸರ್ಕಾರ.
ಅಧಿಕಾರದ ಆಸೆಯೋ, ತಿಳುವಳಿಕೆಯ ಕೊರತೆಯೋ, ಇಲ್ಲವೇ ಅವ್ಯಕ್ತ ಭೀತಿಯೋ, ಹಿಂದಿನ ಮುಖ್ಯಮಂತ್ರಿಗಳು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಸೊಲ್ಲೆತ್ತಲಿಲ್ಲ.
ಆ ಧೈರ್ಯವನ್ನು ನೀವು ತೋರಿಸುತ್ತೀರಿ ಎಂದು ನಂಬಿದ್ದೇನೆ ಎಂದಿದ್ದಾರೆ. ರಾಜ್ಯಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಸರ್ವಪಕ್ಷಗಳ ಸಭೆ ಮತ್ತು ನಿಯೋಗದ ಮೂಲಕ ನ್ಯಾಯ ಪಡೆಯುವ ಪ್ರಯತ್ನದ ಪರಂಪರೆಯೊಂದು ನಮ್ಮಲ್ಲಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯಾದ ಈ ರೀತಿಯ ಮುಕ್ತ ಚರ್ಚೆ-ಸಂವಾದಗಳೇ ನಿಂತು ಬಿಟ್ಟಿವೆ. ನೀವು ಇದಕ್ಕೆ ಮರುಚಾಲನೆ ನೀಡುವಿರೆಂಬ ನಿರೀಕ್ಷೆ ನನ್ನದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.