ಚಿತ್ರಕತೆ ರಚನೆಕಾರ, ಚಿತ್ರಸಾಹಿತಿ, ಮಾಜಿ ಸಂಸದ ಜಾವೇದ್ ಅಖ್ತರ್ ದಾಖಲಿಸಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಕಂಗನಾ ರಣಾವತ್‌ಗೆ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೊನೆಯ ಎಚ್ಚರಿಕೆ ನೀಡಿದೆ. ಮುಂದಿನ ವಿಚಾರಣೆಗೆ ನಟಿ ಹಾಜರಾಗಿಲ್ಲ ಅಂದ್ರೆ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ಕಟುವಾಗಿ ಪ್ರತಿಕ್ರಿಯಿಸಿದೆ.
ಕಂಗನಾ ಪರ ವಕೀಲರು, ”ಕಂಗನಾ ದೇಶದಲ್ಲಿಲ್ಲ, ಹಾಗಾಗಿ, ಇಂದಿನ (ಜುಲೈ 27) ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಇಂದಿನ ವಿಚಾರಣೆಗೆ ವಿನಾಯಿತಿ ಕೊಡಿ” ಎಂದು ನ್ಯಾಯಾಲಯಕ್ಕೆ ಕೋರಿದ್ದರು.
ಆದರೆ, ಜಾವೇದ್ ಅಖ್ತರ್ ಪರ ವಕೀಲ ಜೇ ಭಾರದ್ವಾಜ್, ಕಂಗನಾ ಸಲ್ಲಿಸಿದ್ದ ವಿನಾಯಿತಿಯನ್ನು ಖಂಡಿಸಿದರು. ಇದುವರೆಗೂ ಕಂಗನಾ ಯಾವುದೇ ವಿಚಾರಣೆಗೂ ಹಾಜರಾಗದ ಕಾರಣ ವಾರಂಟ್ (Bailable warrant) ಹೊರಡಿಸಬೇಕು ಎಂದು ವಿನಂತಿಸಿದರು.

ಬಳಿಕ ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ”ಇಂದಿನ ವಿಚಾರಣೆಗೆ ವಿನಾಯಿತಿ ನೀಡಿದೆ. ಆದರೆ ಮುಂದಿನ ವಿಚಾರಣೆಗೆ ನಟಿ ಹಾಜರಾಗಿಲ್ಲ ಅಂದ್ರೆ ವಾರೆಂಟ್ (Bailable warrant) ಜಾರಿ ಮಾಡಲಾಗುವುದು” ಎಂದು ಸೂಚಿಸಿದೆ.
ಇದಕ್ಕೂ ಮುಂಚೆ ಮಾನಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೊಡಬೇಕು ಎಂದು ನಟಿ ಕಂಗನಾ ಅರ್ಜಿ ಸಲ್ಲಿಸಿದ್ದರು.
”ದೇಶದ ವಿವಿದೆಡೆಗಳಲ್ಲಿ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುತ್ತೇನೆ. ವಿಚಾರಣೆ ಸಮಯದಲ್ಲಿ ಅಲ್ಲಿಂದ ಮುಂಬೈಗೆ ಬರುವುದು ಕಷ್ಟ. ಹಾಗಾಗಿ ನನಗೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೊಡಿ. ವಿಚಾರಣೆಗಳಿಗೆ ನನ್ನ ವಕೀಲರು ಹಾಜರಾಗುತ್ತಾರೆ. ನನ್ನ ಅನುಪಸ್ಥಿತಿಯಲ್ಲಿ ಯಾವುದೇ ಸಾಕ್ಷ್ಯಗಳ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಲು ನನ್ನ ಅಭ್ಯಂತರವಿಲ್ಲ” ಎಂದು ಕಂಗನಾ ಅರ್ಜಿಯಲ್ಲಿ ಹೇಳಿದ್ದಾರೆ.

ಏನಿದು ಪ್ರಕರಣ?
ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಮಯದಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಟಿ ಕಂಗನಾ, ‘ಬಾಲಿವುಡ್‌ನಲ್ಲಿ ಆತ್ಮಹತ್ಯೆ ಮಾಡಿಸುವ ಅಸಥವಾ ಆತ್ಮಹತ್ಯೆಗೆ ಪ್ರೇರೇಪಿಸುವ ಗ್ಯಾಂಗ್ ಒಂದು ಇದೆ ಎಂದು ಹೇಳಿ ಕೆಲವರ ಹೆಸರು ಹೇಳಿದ್ದರು. ಆ ಪಟ್ಟಿಯಲ್ಲಿ ಜಾವೇದ್ ಅಖ್ತರ್ ಹೆಸರು ಉಲ್ಲೇಖಿಸಿದ್ದರು. ಹಾಗಾಗಿ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
Laxmi News 24×7