ಮೈಸೂರು: ರೌಡಿಶೀಟರ್ ಹಾಗೂ ಸ್ನೇಹಿತರೊಡನೆ ಹಾರಂಗಿ ಜಲಾಶಯದ ಗೆಸ್ಟ್ ಹೌಸ್‌ನಲ್ಲಿ ಪಾರ್ಟಿ ಮಾಡಿ ಅಮಾನತು ಶಿಕ್ಷೆಗೊಳಗಾಗಿದ್ದ ಸಬ್ ಇನ್ಸ್‌ಪೆಕ್ಟರ್ ಪಿ.ಲೋಕೇಶ್ ಮೇಲೆ ಇದೀಗ ಅತ್ಯಾಚಾರದ ಆರೋಪ ಎದುರಾಗಿದೆ. ಯುವತಿಯನ್ನು ಪರಿಚಯ ಮಾಡಿಕೊಂಡ ಲೋಕೇಶ್, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ವಂಚಿಸಿರುವ ಸಂಬಂಧ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಗಾಯತ್ರಿಪುರಂ ನಿವಾಸಿಯಾದ ಯುವತಿ ಲೋಕೇಶ್ ವಿರುದ್ಧ ಜುಲೈ 16 ರಂದು ದೂರು ದಾಖಲಿಸಿದ್ದಾರೆ. ದೂರು ದಾಖಲಾದಾಗಿನಿಂದ ಲೋಕೇಶ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
2014ರಿಂದ ನಾನು ಮಾನವ ಹಕ್ಕುಗಳ ಸಂಸ್ಥೆೊಂಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ವೇಳೆ ಹುಣಸೂರು ಠಾಣಾ ವ್ಯಾಪ್ತಿಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಪೊಲೀಸ್ ಠಾಣೆಗೆ ತೆರಳಿದ ವೇಳೆ ಲೋಕೇಶ್ ಪರಿಚಯವಾಗಿದ್ದರು. ನಂತರ ರತ್ನಪುರಿ ದೇವರಾಜ್ ಲಾಕಪ್ ಡೆತ್ ಪ್ರಕರಣದಲ್ಲಿ ಅವರನ್ನು ಭೇಟಿಯಾಗಿದ್ದೆ. ಕೆಲ ದಿನಗಳ ನಂತರ ಕೆ.ಆರ್.ನಗರ ತಾಲ್ಲೂಕಿನ ಕಪ್ಪಡಿ ಜಾತ್ರೆಯಲ್ಲಿ ಅವರನ್ನು ಭೇಟಿಯಾಗಿದ್ದೆ. ನಮ್ಮ ತಂದೆಯವರ ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ನ್ಯಾಯಾಲಯಕ್ಕೆ ಹೋಗಿದ್ದ ವೇಳೆ ಅಲ್ಲಿ ಕೂಡ ಸಿಕ್ಕಿದ್ದರು. ನಂತರ ನನ್ನ ತಂದೆಗೆ ಸೇರಿದ್ದ ಆಸ್ತಿ ವಿವಾದವನ್ನು ತಿಳಿದುಕೊಂಡ ಅವರು, ವಿವಾದವನ್ನು ಬಗೆಹರಿಸಿಕೊಡುವುದಾಗಿ ಹೇಳಿದ್ದರು. ಆಗ ಅವರು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಾರ್ಚ್ 16, 2020 ರಂದು ಬೆಟ್ಟದಪುರ ಪೊಲೀಸ್ ಠಾಣೆಗೆ ನಾನು ತೆರಳಿದ್ದೆ. ಠಾಣೆಯಿಂದ ಅವರ ಕ್ವಾಟ್ರಸ್‌ಗೆ ಕರೆದುಕೊಂಡು ಹೋದ ಲೋಕೇಶ್, ಯಾರೂ ಇಲ್ಲದ ಸಮಯದಲ್ಲಿ ನನ್ನನ್ನು ಬಲವಂತವಾಗಿ ಕೊಠಡಿಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ನಂತರ ನನ್ನನ್ನು ವಿವಾಹವಾಗುವುದಾಗಿ ನಂಬಿಸಿ, ಮತ್ತಷ್ಟು ಸಲುಗೆ ಬೆಳೆಸಿಕೊಂಡು ಆಗಾಗ್ಗೆ ಗಾಯತ್ರಿಪುರಂನ ನನ್ನ ಮನೆಗೆ ಬಂದು ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ನಂತರ ನಾನು ಆತನೊಡನೆ ಮಾತನಾಡಿ, ಮದುವೆಯಾಗುವಂತೆ ಒತ್ತಾಯಿಸಿದಾಗ ಲೋಕೇಶ್‌ನ ಪತ್ನಿ ಹಾಗೂ ಸಂಬಂಧಿಕರು ನನಗೆ ಕರೆ ಮಾಡಿ ಲೋಕೇಶ್ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಇದೀಗ ಪೊಲೀಸರು ಲೋಕೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆತನ ಬಂಧನಕ್ಕೆ ಬಲೆಬೀಸಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್, ಸ್ಥಳೀಯ ರೌಡಿಯೊದಿಗೆ ಗೆಸ್ಟ್ ಹೌಸ್‌ವೊಂದರಲ್ಲಿ ಪಾರ್ಟಿ ಮಾಡಿದ್ದರು. ಈ ಸಂಬಂಧ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಏಪ್ರಿಲ್ 17, 2020ರಂದು ರಾತ್ರಿ 8 ಗಂಟೆಯಿಂದ ತಡರಾತ್ರಿ 2 ಗಂಟೆಯವರೆಗೆ ರೌಡಿ ಶೀಟರ್ ಜೊತೆಯಲ್ಲಿ ಪಾರ್ಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದರು.
ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಣ್ಣಯ್ಯ ಎಂಬವರು ಹುಣಸೂರು ಡಿವೈಎಸ್ಪಿ, ಎಸ್ಪಿ ಹಾಗೂ ಐಜಿಪಿ ಅವರಿಗೆ ದೂರು ನೀಡಿದ್ದರು. ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದು ಇಲಾಖೆ ನಿಯಮಕ್ಕೆ ವಿರುದ್ಧವಾಗಿ ರೌಡಿಗಳೊಂದಿಗೆ ಶಾಮೀಲಾಗಿರುವುದು ಕಂಡು ಬಂದಿದೆ ಎಂದು ಆರೋಪಿಸಿ ಅಂದಿನ ಎಸ್‌ಪಿ ರಿಷ್ಯಂತ್ ಅವರು ಎಸ್‌ಐ ಲೋಕೇಶ್ ಅವರನ್ನು ಅಮಾನತ್ತುಗೊಳಿಸಿದ್ದರು. ಇಲಾಖೆ ವಿಚಾರಣೆ ನಂತರ ಲೋಕೇಶ್‌ನನ್ನು ಸಕಲೇಶಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಹುಣಸೂರು ತಾಲ್ಲೂಕಿನ ರತ್ನಪುರಿ ಗ್ರಾಮದ ದೇವರಾಜು ಎಂಬವರು ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದರು. ಆತನ ಸಾವಿಗೆ ಪೊಲೀಸರ ಹಲ್ಲೆೆಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ವೇಳೆ ಎಸ್‌ಐ ಆಗಿದ್ದ ಲೋಕೇಶ್ ಅವರನ್ನು ಬೆಟ್ಟದಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.