ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮತ್ತೆ ಮಳೆರಾಯನ ಅಬ್ಬರ ಆರಂಭವಾಗಿದೆ. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿ ಸೇತುವೆಗಳು ಜಲಾವೃತವಾಗಿದೆ.
ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಕೊಂಕಣ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆ ಕೃಷ್ಣಾ ನದಿಯಲ್ಲಿ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾದ ಪರಿಣಾಮ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿಯ ಕಲ್ಲೋಳ – ಯಡೂರ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಸದ್ಯ 56 ಸಾವಿರ ಕ್ಯೂಸೇಕ್ ನಷ್ಟು ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ ನದಿಯಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಳ ಹಿನ್ನೆಲೆ ನದಿ ತೀರದ ಜನರಲ್ಲಿ ಆತಂಕ ಉಂಟಾಗಿದ್ದು, ಇವತ್ತು ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಹೈ ಅಲರ್ಟ ಜಾರಿ ಮಾಡಲಾಗಿದೆ.ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‍ನಿಂದ 44,750 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 11,649ಕ್ಯೂಸೆಕ್ ನೀರು ಹೀಗೆ ಒಟ್ಟು 56,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ – 23 ಮಿ.ಮೀ, ನವಜಾ – 70 ಮಿ.ಮೀ, ಮಹಾಬಲೇಶ್ವರ – 57 ಮಿ.ಮೀ, ವಾರಣಾ – 10 ಮಿ.ಮೀ, ಕಾಳಮ್ಮವಾಡಿ – 15 ಮಿ.ಮೀ, ರಾಧಾನಗರಿ – 42 ಮಿ.ಮೀ, ಪಾಟಗಾಂವ – 104 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಮತ್ತೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿರುವ ವರದಿಯಾಗಿದೆ. ಹಿಪ್ಪರಗಿ ಬ್ಯಾರೆಜ್‍ನಿಂದ 44,750 ಹಾಗೂ ಆಲಮಟ್ಟಿ ಜಲಾಶಯದಿಂದ 43,960 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.