ಚೆನ್ನೈ: ಅವರೆಲ್ಲರೂ ಒಂದೇ ಗ್ರಾಮಕ್ಕೆ ಸೇರಿದವರು. ಎಲ್ಲರೂ ಒಟ್ಟಿಗೆ ತಮ್ಮ ಗ್ರಾಮದ ದೇವಸ್ಥಾನದ ಬಳಿಯಿರುವ ಕೆರೆಗೆ ಮಕ್ಕಳ ಜತೆಯಲ್ಲಿ ತೆರಳಿದ್ದರು. ಮಕ್ಕಳೆಂದ ಮೇಲೆ ಅಲ್ಲಿ ತುಂಟಾಟ, ಕಿತ್ತಾಟ ಇದ್ದೇ ಇರುತ್ತದೆ. ಮಹಿಳೆಯರು ನದಿಯಲ್ಲಿ ಬಟ್ಟೆ ಹೊಗೆಯುತ್ತಿರಬೇಕಾದರೆ ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಹೀಗಿರುವಾಗ ಬಾಲಕಿಯೊಬ್ಬಳು ನೀರಿನಲ್ಲಿ ಸಿಲುಕಿಕೊಂಡಾಗ ಆಕೆಯ ರಕ್ಷಣೆಗೆ ಹೋದ ಐವರು ನೀರುಪಾಲಾಗಿರುವ ದುರಂತ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ಬುಧವಾರ ನಡೆದಿದೆ.
ಮೃತರನ್ನು ರಾಜು ಪತ್ನಿ ಸುಮತಿ (35), ಮಗಳು ಅಶ್ವಿತಾ (15) ದೇವೇಂದ್ರನ್ ಮಗಳು ಜೀವಿತಾ (14) ಗುಣಶೇಖರನ್ ಮಗಳು ನರ್ಮದಾ (12) ಮತ್ತು ಮುನಸ್ವಾಮಿ ಪತ್ನಿ ಜ್ಯೋತಿಲಕ್ಷ್ಮಿ (30) ಎಂದು ಗುರುತಿಸಲಾಗಿದೆ. ಇವೆರೆಲ್ಲರು ತಿರುವಳ್ಳೂರಿನ ಕರುಂಪುಕುಪ್ಪಮ್ ಗ್ರಾಮದ ನಿವಾಸಿಗಳು. ಗ್ರಾಮದ ಅಂಕಾಳಪರಮೇಶ್ವರಿ ದೇವಸ್ಥಾನ ಸಮೀಪದ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಬಟ್ಟೆ ಒಗೆಯಲು ತೆರಳಿದ್ದರು.
ಜ್ಯೋತಿಲಕ್ಷ್ಮೀ ಮತ್ತು ಸುಮತಿ ಪುಷ್ಕರಣಿ ಕೆರೆಯ ದಡದಲ್ಲಿ ಬಟ್ಟೆ ಒಗೆಯುವಾಗ ನರ್ಮದಾ, ಅಶ್ವಿತಾ ಮತ್ತು ಜೀವಿತಾ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ನರ್ಮದಾ ಕೆರೆಯ ಆಳಕ್ಕೆ ಹೋಗಿ ಮಣ್ಣಿನಲ್ಲಿ ಸಿಲುಕಿದ್ದಾಳೆ. ಇದಾದ ನಂತರದಲ್ಲಿ ಆಕೆಯನ್ನು ಕಾಪಾಡಲು ಒಬ್ಬರ ಹಿಂದೆ ಒಬ್ಬರಂತೆ ಹೋಗಿ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಸಂಜೆಯಾದರೂ ಯಾರೊಬ್ಬರು ಮನೆಗೆ ಮರಳದಿದ್ದನ್ನು ನೋಡಿ ಅನುಮಾನಗೊಂಡ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದು ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಐವರು ಮೃತದೇಹವನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹವನ್ನು ಪೊನ್ನೇರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದಾರೆ.
ಮೂವರು ಹುಡುಗಿಯರು ಸೇರಿ ಒಟ್ಟು ಐವರು ಮಂದಿ ಮೃತಪಟ್ಟಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಕುಟುಂಬದಲ್ಲಿ ಶೋಕ ಸಾಗರ ಆವರಿಸಿಕೊಂಡಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ