ಬೆಂಗಳೂರು, : ಕೊರೊನಾ ಲಾಕ್ ಡೌನ್ ಮುಗಿಯುತ್ತಿದ್ದಂತೆ ದರೋಡೆಕೋರರು ಫೀಲ್ಡ್‌ಗೆ ಇಳಿದಿದ್ದಾರೆ. ರಾತ್ರಿ ವೇಳೆ ಮನೆಗೆ ಹೋಗುತ್ತಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅಡ್ಡಗಟ್ಟಿ ಮೂವರು ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದಾರೆ. ಪಿಎಸ್‌ಐ ಧರಿಸಿದ್ದ ಪೊಲೀಸ್ ಹೆಲ್ಮೆಟ್ ನೋಡಿ ಪರಾರಿಯಾಗಿದ್ದ ಮೂವರು ದರೋಡೆಕೋರರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ರವಿಕುಮಾರ್, ಬಾಲು ಮತ್ತು ಅಶೀತ್ ಗೌಡ ಬಂಧಿತ ಆರೋಪಿಗಳು. ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಚ್.ಎಲ್. ಕೃಷ್ಣ ಜು. 3 ರಂದು ಕೆಲಸ ಮುಗಿಸಿ ತನ್ನ ಹೀರೋ ಹೊಂಡಾ ಬೈಕಿನಲ್ಲಿ ರಾಜಗೋಪಾಲನಗರದಲ್ಲಿರುವ ಮನೆಗೆ ತೆರಳಿದ್ದರು. 9.30 ರ ಸುಮಾರಿನಲ್ಲಿ ಬೈಕ್ ಅಡ್ಡ ಗಟ್ಟಿದ ಮೂವರು ದುಷ್ಕರ್ಮಿಗಳು, ನಿನ್ನ ಬಳಿ ಏನಿದೆ ತೆಗೆದುಕೊಂಡು ಬಾ ಎಂದು ಹೆದರಿಸಿದ್ದಾರೆ. ಜೇಬಿನಲ್ಲಿರುವ ಮೊಬೈಲ್ ಕೊಡುವಂತೆಯೂ ಸೂಚಿಸಿದ್ದಾರೆ. ದರೋಡೆಕೋರರ ಅವಾಜ್‌ಗೆ ಹೆದರಿ ಮೊಬೈಲ್ ಕೊಡಲು ಮುಂದಾಗಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೃಷ್ಣ ಅವರು ಧರಿಸಿದ್ದ ಪೊಲೀಸ್ ಹೆಲ್ಮೆಟ್ ನೋಡಿ ಮೂವರು ಓಡಿ ಹೋಗಿದ್ದಾರೆ. ಬೈಕ್ ನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಬೈಕ್ ನಂಬರ್ ಉಲ್ಲೇಖಿಸಿ ಪಿಎಸ್‌ಐ ಕೃಷ್ಣ ರಾಜಗೋಪಾಲನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಮೂವರು ದರೋಡೆಕೋರರನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ರಾತ್ರಿ ವೇಳೆ ಓಡಾಡುವ ಜನರನ್ನು ಅಡ್ಡಗಟ್ಟಿ ದೋರೋಡೆ ಮಾಡುತ್ತಿದ್ದ ಕೃತ್ಯಗಳನ್ನು ಒಪ್ಪಿಕೊಂಡಿದ್ದಾರೆ. ಪ್ರತಿ ನಿತ್ಯವೂ ದರೋಡೆ ಮಾಡುತ್ತಿದ್ದನ್ನು ಒಪ್ಪಿಕೊಂಡಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸ್ ಹೆಲ್ಮೆಟ್ ಇಲ್ಲದಿದ್ದಲ್ಲಿ ಪಿಎಸ್‌ಐ ಕೂಡ ದರೋಡೆಗೆ ಒಳಗಾಗುತ್ತಿದ್ದರು.