ಬೆಂಗಳೂರು: ಟೆಕ್ಕಿಯೊಬ್ಬ ಕೈ ಹಿಡಿದ ಪತ್ನಿಗೆ ಹಿಂಸೆ ನೀಡಲು ಆತ ಕಂಡುಕೊಂಡ ದಾರಿ ಕೇಳಿದ್ರೆ ಹಿಡಿಶಾಪ ಹಾಕ್ತೀರಿ. ಪತ್ನಿಯನ್ನ ವೇಶ್ಯೆ ಎಂದು ಬಿಂಬಿಸಲು ಅವಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಅವಳ ಮೊಬೈಲ್ ನಂಬರ್ ಅನ್ನೂ ಹಾಕಿದ್ದ. ಹಲವು ಮೊಬೈಲ್ ನಂಬರ್ಗಳಿಂದ ಪತ್ನಿಗೆ ಅಶ್ಲೀಲ ಸಂದೇಶ ಕಳಿಸಿದ್ದ. ಸಾವಿರಕ್ಕೂ ಹೆಚ್ಚಿನ ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಅಸಭ್ಯವಾಗಿ ಕಮೆಂಟ್ ಮಾಡಿ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದ 29 ವರ್ಷದ ಯುವಕ ಸ್ಟೋರಿ ಇದು. ಪತ್ನಿಗೆ ಹಿಂಸೆ ಕೊಟ್ಟ ಆರೋಪಿ ಹೆಸರು ಜಯಶಂಕರ್ ಕುಮಾರ್ ಸಿಂಗ್. ಆರೋಪಿ ಮತ್ತು ಇವನ ಹೆಂಡತಿ ಇಬ್ಬರೂ ಇಂಜಿನಿಯರ್. 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಇವರು ಬೆಂಗಳೂರಿನಲ್ಲೇ ವಾಸವಿದ್ದಾರೆ.
ಮದುವೆ ಆದ ಆರಂಬದಿಂದಲೂ ಪತ್ನಿಯೇ ಮನೆಯ ಖರ್ಚುಗಳನ್ನು ಭರಿಸುತ್ತಿದ್ದಳು. ಆದರೂ, ಜಯಶಂಕರ್ ತವರು ಮನೆಯವರೊಂದಿಗೆ ಮಾತನಾಡಬಾರದು ಎಂದು ತಾಕೀತು ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕಿರುಕುಳ ಕೊಡುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಚೂರಿಯಿಂದ ಇರಿದು ಬಿಡುವುದಾಗಿ ಬೆದರಿಕೆ ಹಾಕಿದ್ದ. ಕಿರುಕುಳ ತಾಳಲಾರದೇ 2020ರ ನವೆಂಬರ್ನಲ್ಲಿ ಗಂಡನನ್ನು ತೊರೆದು ಪಿಜಿಯಲ್ಲಿ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.
ಮನೆ ಬಿಟ್ಟು ಬಂದರೂ ಸುಮ್ಮನಾಗದ ಪತಿ ವಿವಿಧ ನಂಬರ್ಗಳಿಂದ ಆಕೆಗೆ ಅಶ್ಲೀಲ ಸಂದೇಶ ಕಳಿಸಿ ತೊಂದರೆ ಕೊಡುತ್ತಿದ್ದ. ಸಾವಿರಕ್ಕೂ ಹೆಚ್ಚಿನ ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಅಸಭ್ಯವಾಗಿ ಕಮೆಂಟ್ ಮಾಡಿದ್ದ. ಪತ್ನಿಯ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ಖಾತೆ ಸೃಷ್ಟಿಸಿ ಅದರಲ್ಲಿ ಆಕೆಯ ಮೊಬೈಲ್ ನಂಬರ್ನ್ನು ಹಾಕಿ ಎಸ್ಕಾರ್ಟ್ ಸರ್ವೀಸ್ ಎಂದು ನಮೂದಿಸಿದ್ದ. ಇತ್ತೀಚೆಗೆ ದೂರುದಾರ ಮಹಿಳೆಯ ಮೊಬೈಲ್ ನಂಬರ್ಗೆ ಹಲವರಿಂದ ಕೆಟ್ಟ ಸಂದೇಶ ಹಾಗೂ ಕರೆಗಳು ಬರುತ್ತಿದ್ದವು. ಏಕಾಏಕಿ ಈ ರೀತಿಯಾಗಿ ಕರೆಗಳು ಬರುತ್ತಿರುವುದನ್ನು ಕಂಡು ಆತಂಕಗೊಂಡ ಮಹಿಳಾ ಟೆಕ್ಕಿ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದಾಗ ಪತಿಯ ಕೃತ್ಯ ಬಯಲಿಗೆ ಬಂದಿದೆ.
ಕಳೆದ ಜನವರಿಯಲ್ಲಿ ಪತಿಯ ವಿರುದ್ಧ ಹಲಸೂರು ಠಾಣೆಯಲ್ಲಿ ದೂರು ನೀಡಲಾಗಿತ್ತು. ಮುಂದೆ ತೊಂದರೆ ಕೊಡುವುದಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದ ಪತಿ ಇದೀಗ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾನೆ. ವಿಕೃತಿ ತೋರಿದ ಗಂಡನ ವಿರುದ್ಧ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ಎಫ್ಐಆರ್ ದಾಖಲಿಸಿದ್ದಾಳೆ. ಗಂಡನ ವಿಕೃತಿಗೆ ಅವನ ಕುಟುಂಬಸ್ಥರೂ ಸಹಕಾರ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ.