ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಕೆಲ ದಿನಗಳಿಂದ ದೇವಿ ವಿಗ್ರಹ ಕಣ್ಣುಬಿಟ್ಟಿರುವುದೇ ಭಾರಿ ಸುದ್ದಿಯಾಗಿದೆ. ಸಂತೂಬಾಯಿ ದೇವಸ್ಥಾನದ ದೇವಿ ರಾತ್ರೋರಾತ್ರಿ ಕಣ್ಣುಬಿಟ್ಟಿದ್ದು ಅದೆಷ್ಟು ಶರವೇಗದಲ್ಲಿ ಹರಡಿತ್ತು ಎಂದರೆ ಗ್ರಾಮಸ್ಥರು ಮಾತ್ರವಲ್ಲದೇ ಅಕ್ಕಪಕ್ಕದ ಊರಿನವರೂ ಈ ಪವಾಡವನ್ನು ನೋಡಲು ತಂಡೋಪತಂಡವಾಗಿ ಬರತೊಡಗಿದರು.
ಕರೊನಾ ತೊಲಗಿಸಲು ಈ ದೇವಿ ಕಣ್ಣು ಬಿಟ್ಟಿರುವುದಾಗಿ ಹೇಳಿದ್ದ ಅರ್ಚಕ, ಈ ದೇವಿಯನ್ನು ಪೂಜೆ ಮಾಡಿದರೆ ಕರೊನಾ ತೊಲಗುವುದಾಗಿ ಹೇಳಿದ್ದರು. ಆದ ಕಾರಣ ದೇವಿಗೆ ಭಾರಿ ಜೋರಾಗಿ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದವು. ಇನ್ನು ದೇವಿ ಕಣ್ಣುಬಿಟ್ಟ ವಿಷಯ ಮಾಧ್ಯಮಗಳಲ್ಲಿಯೂ ಪ್ರಸಾರವಾಯಿತು. ದೇವಿಯೇ ಕಣ್ಣು ಬಿಟ್ಟಳೋ ಅಥವಾ ಯಾರಾದರು ಕಣ್ಣು ಬಿಡಿಸಿದರೋ ಎಂಬುದು ಕೂಡ ಬಯಲಾಗಬೇಕಿದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವಿವರಣೆ ನೀಡಲಾಗಿತ್ತು. ಈ ಪರಿಯಲ್ಲಿ ರಾತ್ರೋರಾತ್ರಿ ಫೇಮಸ್ ಆದ ದೇವಿ ಹಾಗೂ ಅದನ್ನು ನೋಡಲು ಬರುತ್ತಿರುವ ಜನ ಸಮೂಹದ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಈ ಬಗ್ಗೆ ತಿಳಿಯಲೇಬೇಕೆಂದು ತನಿಖೆ ಆರಂಭಿಸಿದಾಗ ದೇವಿಯ ರಹಸ್ಯ ಬಯಲಾಗಿದೆ. ಅದೇನೆಂದರೆ ಇಲ್ಲಿಯ ಅರ್ಚಕನೇ ಹೆಸರು ಮಾಡುವ ಹಾಗೂ ಹಣ ಗಳಿಸುವ ಉದ್ದೇಶದಿಂದ ದೇವಿಯ ಮೂರ್ತಿಗೆ ಕೃತಕ ಕಣ್ಣು ಜೋಡಿಸಿರುವುದು ತಿಳಿದಿದೆ. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಅವರು, ಅರ್ಚಕನ್ನು ತರಾಟೆಗೆ ತೆಗೆದುಕೊಂಡಿದ್ದು, ದೇವಿಗೆ ಅಂಟಿಸಿದ್ದ ಕೃತಕ ಕಣ್ಣು ತೆಗೆಸಿದ್ದಾರೆ. ಇನ್ನುಮುಂದೆ ಇಂಥ ಕೃತ್ಯ ಎಸಗಿದರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ದೇವಿ ಕಣ್ಣುಬಿಟ್ಟ ರಹಸ್ಯ ಬಹಿರಂಗಗೊಂಡಿದ್ದು, ಭಕ್ತ ಸಮೂಹದಲ್ಲಿ ನಿರಾಸೆಯಾಗಿದೆ.