Breaking News

ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಇನ್ನಿಬ್ಬರ ಬಂಧನ; ಬಂಧಿತರ ಸಂಖ್ಯೆ 7ಕ್ಕೆ ಏರಿಕೆ

Spread the love

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಸಹೋದರಿ ಮಾಲಾ ಮತ್ತು ಪುತ್ರ ಅರುಳ್ ಅವರುಗಳನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ 3 ದಿನಗಳಿಂದ ತೀವ್ರ ವಿಚಾರಣೆ ನಡೆಸಿದ್ದ ಪೊಲೀಸರು ರೇಖಾ ಕದಿರೇಶ್ ಹತ್ಯೆಯಲ್ಲಿ ಮಾಲಾ, ಅರುಳ್ ಪಾತ್ರದ ಬಗ್ಗೆ ಸಾಕ್ಷ್ಯ ದೊರಕಿದ ಕಾರಣ ಬಂಧಿಸಿದ್ದಾರೆ. ಈಮೂಲಕ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಈವರೆಗೆ ಕೇಸ್‌ನಲ್ಲಿ ಈವರೆಗೆ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಮಾಜಿ ಕಾರ್ಪೊರೇಟರ್‌ ರೇಖಾ ಕದಿರೇಶ್​ ಹತ್ಯೆ ಪ್ರಕರಣದ ತನಿಖೆಗೆಂದು ಪೊಲೀಸರು 6 ವಿಶೇಷ ತಂಡಗಳನ್ನು ರಚಿಸಿದ್ದರು. ಕಾಟನ್​ಪೇಟೆ ಇನ್​ಸ್ಪೆಕ್ಟರ್ ಚಿದಾನಂದ ಮೂರ್ತಿ, ಸಿಟಿಮಾರ್ಕೆಟ್ ಇನ್​ಸ್ಪೆಕ್ಟರ್ ಕುಮಾರಸ್ವಾಮಿ, ಕಾಮಾಕ್ಷಿಪಾಳ್ಯ ಇನ್​ಸ್ಪೆಕ್ಟರ್ ಪ್ರಶಾಂತ್, ಉಪ್ಪಾರಪೇಟೆ ಇನ್​ಸ್ಪೆಕ್ಟರ್ ಶಿವಸ್ವಾಮಿ, ಕಲಾಸಿಪಾಳ್ಯ ಇನ್​ಸ್ಪೆಕ್ಟರ್ ಚಂದ್ರಕಾಂತ್, ಚಾಮರಾಜಪೇಟೆ ಇನ್​ಸ್ಪೆಕ್ಟರ್ ಲೋಕಾಪುರ ನೇತೃತ್ವದ ತಂಡಗಳು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದವು.

ಕೊಲೆಗೆ ಸಂಬಂಧಿಸಿದಂತೆ ರಾತ್ರಿಯೇ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. 39 ಜನರನ್ನು ಪೊಲೀಸರು ತಮ್ಮ ವಶದಲ್ಲಿಯೇ ಇರಿಸಿಕೊಂಡು ರಾತ್ರಿಯಿಡೀ ವಿಚಾರಣೆ ನಡೆಸಿದ್ದರು. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಪೀಟರ್ ಜೊತೆಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದ. ಇವನಿಂದ ಮತ್ತಷ್ಟು ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದರು.

ಎಲೆಕ್ಟ್ರಾನಿಕ್ ಸಿಟಿ, ಹೋಸೂರು ರಸ್ತೆ, ಸಿಂಗೇನ ಅಗ್ರಹಾರ, ಚಂದಾಪುರ, ವರ್ತೂರು, ಹುಸ್ಕೂರು ಬಳಿ ಪೊಲೀಸರು ಹುಡುಕಾಟ ನಡೆಸಿದ್ದರು. ಆರೋಪಿಗಳ ಪತ್ತೆಗಾಗಿ ಅಹೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಪಾಲ್ಗೊಂಡಿದ್ದರು.

ಕೊಲೆ ಬಳಿಕೆ ಆರೋಪಿಗಳು ಒಂದೆಡೆ ನೆಲೆ ನಿಂತಿರಲಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಟೊದಲ್ಲಿ ತಿರುಗುತ್ತಲೇ ಇದ್ದರು. ನಸುಕಿನ ಮೂರೂವರೆ ಸುಮಾರಿಗೆ ಆರೋಪಿಗಳು ಆಟೊದಲ್ಲಿ ತಿರುಗಾಡುತ್ತಿರುವ ಮಾಹಿತಿ ಅರಿತ ಪೊಲೀಸರು ಆಟೊ ಬೆನ್ನುಹತ್ತಿದರು. ಆಸ್ಟಿಂಗ್ ಟೌನ್​ನಲ್ಲಿ ಪೊಲೀಸರಿಗೆ ಮೊದಲಬಾರಿಗೆ ಆಟೊ ಬಗ್ಗೆ ಮಾಹಿತಿ ಸಿಕ್ಕಿತ್ತು.

ಆಸ್ಟಿನ್ ಟೌನ್ ಬಳಿಕ ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಸಿಂಗೇನ ಅಗ್ರಹಾರ, ಕೊಡತಿ, ಚಿಕ್ಕನಾಯಕನಹಳ್ಳಿ, ಶ್ರಿರಾಮಪುರ, ರಾಜಾಜಿನಗರ, ವಿಜಯನಗರ, ರಾಜಾಜಿನಗರದಲ್ಲಿ ಆರೋಪಿಗಳು ಸಂಚರಿಸಿದ್ದರು. ಮೈಸೂರು ರಸ್ತೆಯ ಮೂಲಕ ಅರೋಪಿಗಳು ಸಂಚರಿಸಿರುವ ವಿಷಯ ಪೊಲೀಸರಿಗೆ ಪಕ್ಕಾ ಆಗಿತ್ತು. ಆದರೆ ಬೆಳಿಗ್ಗೆ ಒಂಬತ್ತು ಮುಕ್ಕಾಲಿಗೆ ಆರೋಪಿಗಳ ಜಾಡು ಪೊಲೀಸರಿಗೆ ತಪ್ಪಿಹೋಗಿತ್ತು.

ಸ್ವಲ್ಪ ಹೊತ್ತಿನ ನಂತರ ಮಾಗಡಿ ರಸ್ತೆಯಲ್ಲಿ ಆರೋಪಿಗಳ ಚಲನಚಲನದ ಮಾಹಿತಿ ಸಿಕ್ಕಾಗ ಪೊಲೀಸರು ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿದರು. ಹಲವು ತಂಡಗಳೊಂದಿಗೆ ಆರೋಪಿಗಳ ಬೆನ್ನುಹತ್ತಿದರು. ಹನ್ನೆರಡು ಗಂಟೆ ವೇಳೆಗೆ ಸುಂಕದಕಟ್ಟೆ ಬಳಿಯ ಬಜಾಜ್ ಗ್ರೌಂಡ್ ಬಳಿ ಆರೋಪಿಗಳು ಇರುವ ಮಾಹಿತಿಯನ್ನು ದೃಢಪಡಿಸಿಕೊಂಡ ಉಪ್ಪಾರಪೇಟೆ ಇನ್​ಸ್ಪೆಕ್ಟರ್​ ಶಿವಸ್ವಾಮಿ ಮತ್ತು ಕಾಟನ್​ಪೇಟೆ ಇನ್​ಸ್ಪೆಕ್ಟರ್ ಚಿದಾನಂದಮೂರ್ತಿ ಆರೋಪಿಗಳನ್ನು ಗುರುತಿಸಿ, ಬಂಧಿಸಲು ಮುಂದಾದರು.

ಮದ್ಯಪಾನ ಮಾಡುತ್ತಿದ್ದ ಆರೋಪಿಗಳು ಸಬ್​ಇನ್​ಸ್ಪೆಕ್ಟರ್ ಕರಿಯಣ್ಣ ಮತ್ತು ಹೆಡ್ ಕಾನ್​ಸ್ಟೆಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಪೊಲೀಸರು, ಅರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡು ಲಕ್ಷ್ಮೀ ಅಸ್ಪತ್ರೆಗೆ ದಾಖಲು ಮಾಡಿದರು. ಮಾಗಡಿ ರಸ್ತೆ ಠಾಣೆಯ ಇನ್​ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡವು ತಾಂತ್ರಿಕ ಕೆಲಸಗಳನ್ನು ನಿರ್ವಹಿಸಿತು.


Spread the love

About Laxminews 24x7

Check Also

ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್! ಅರ್ಜಿ ಸಲ್ಲಿಕೆ ಹೇಗೆ?

Spread the love ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ