ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಜುಲೈ ಎರಡನೇ ವಾರ ಎಸ್‌ಎಸ್‌ಎಲ್ ಸಿ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಇದನ್ನು ನಾನು ಸ್ಪಷ್ಟವಾಗಿ ವಿರೋಧ ಮಾಡುವೆ, ಯಾವುದೇ ಕಾರಣಕ್ಕೂ ಎಸ್‌ಎಸ್‌ಎಲ್ ಸಿ ಪರೀಕ್ಷೆ ಮಾಡಬಾರದು. ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 10 ಲಕ್ಷ ವಿದ್ಯಾರ್ಥಿಗಳು ,ಪೋಷಕರು, ಸಿಬ್ಬಂದಿ ಸೇರಿ 25 ಲಕ್ಷ ಪರೀಕ್ಷೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ. ಡಾ. ದೇವಿ ಶೆಟ್ಟಿ ವರದಿಯಲ್ಲಿ ಸಂಪೂರ್ಣ ಲಸಿಕೆ ನಂತರ ಶಾಲೆ ಆರಂಭ ಮಾಡಬೇಕು ಎಂದಿದೆ. ಇನ್ನೂ ಶಾಲೆ ಅರಂಭವಾಗಿಲ್ಲ, ವಿದ್ಯಾರ್ಥಿಗಳ ಜೀವ ಮುಖ್ಯ ಎಂದು ಹೇಳಿದರು.
ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ. ಸಾಮಾನ್ಯವಾಗಿ ಪಿಯುಸಿ ಪರೀಕ್ಷೆ ಮಾಡಬೇಕಿತ್ತು. ಎಸ್‌ಎಸ್‌ಎಲ್ ಸಿ ಪರೀಕ್ಷೆ ರದ್ದಾದರೆ ಏನೂ ತೊಂದರೆ ಆಗುವುದಿಲ್ಲ ಎಂದ ವಾಟಾಳ್ ನಾಗರಾಜ್, ಎಲ್ಲರನ್ನೂ ಪಾಸ್ ಮಾಡುವುದಾಗಿ ಹೇಳಿ ಪರೀಕ್ಷೆ ಮಾಡುತ್ತಿದ್ದೀರಿ. ಸುರೇಶ್ ಕುಮಾರ್ ಅವರೇ ಹಠಕ್ಕೆ ಬೀಳಬೇಡಿ. ಅತ್ಯಂತ ಗಂಭೀರವಾದ ಪರಿಸ್ಥಿತಿಯಿದೆ, ಹಾಗಾಗಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ಮಾಡಬೇಡಿ ಎಂದರು.