ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಂಚೂಣಿ ಘಟಕಗಳನ್ನು ಪುನರ್ ರಚಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ಕಾರ್ಯಾಧ್ಯಕ್ಷರ ಜತೆ ಶನಿವಾರ ಸಭೆ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಂಚೂಣಿ ಘಟಕಗಳ ಪುನರ್ ರಚನೆ, ಕೆಲವು ಜಿಲ್ಲಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರ ಬದಲಾವಣೆ, ಬ್ಲಾಕ್ ಕಾಂಗ್ರೆಸ್ ಘಟಕಗಳ ಪುನರ್ ರಚನೆ ಸಿದ್ಧತೆ ಕುರಿತು ಚರ್ಚೆ ನಡೆಯಿತು.
ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ, ಈಶ್ವರ್ ಖಂಡ್ರೆ, ಧ್ರುವನಾರಾಯಣ್, ಸಲೀಂ ಅಹ್ಮದ್ ಸಭೆಯಲ್ಲಿದ್ದರು. ಐದು ವಲಯಗಳನ್ನು ಪ್ರತಿನಿಧಿಸುತ್ತಿರುವ ಕಾರ್ಯಾಧ್ಯಕ್ಷರು, ಪಕ್ಷ ಸಂಘಟನೆಯಲ್ಲಿ ಮಾಡಬೇಕಾದ ಬದಲಾವಣೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ರೈತರನ್ನು ವಶಕ್ಕೆ ಪಡೆದಿದ್ದು ಸರಿಯಲ್ಲ: ಸಭೆಗೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ‘ಪೊಲೀಸರು ರೈತ ಮುಖಂಡರನ್ನು ವಶಕ್ಕೆ ಪಡೆದಿದ್ದು ಸರಿಯಲ್ಲ. ದೇಶದಲ್ಲಿ ನವೆಂಬರ್ ತಿಂಗಳಿನಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ಇಷ್ಟು ದೊಡ್ಡ ಹೋರಾಟ ಎಂದೂ ನಡೆದಿರಲಿಲ್ಲ’ ಎಂದರು.
‘ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಚಿಂತೆಯಿಲ್ಲ. ರೈತ ವಿರೋಧಿ ಕಾನೂನುಗಳನ್ನು ಬಿಜೆಪಿ ಸರ್ಕಾರ ತಂದಿದೆ. ಎಪಿಎಂಸಿಗಳನ್ನು ರೈತರ ಅನುಕೂಲಕ್ಕೆ ತರಲಾಗಿತ್ತು. ಅದನ್ನೂ ವ್ಯಾಪಾರಿಗಳ ಕೈಗೆ ಕೊಟ್ಟಿದ್ದಾರೆ. ಬಿಜೆಪಿ ರೈತ ವಿರೋಧಿ ಪಕ್ಷ. ಪ್ರತಿಭಟನಾನಿರತ ರೈತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯವರು ಇನ್ನೇನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.