ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ನಿರ್ದೇಶಕರನ್ನಾಗಿ ಡಾ. ಪ್ರತಿಮಾ ಮೂರ್ತಿ ಅವರನ್ನು ಕೇಂದ್ರ ಆರೋಗ್ಯ ಸಚಿವಾಲಯ ನೇಮಕ ಮಾಡಿದೆ.
ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ನಿರ್ದೇಶಕರ ಅವಧಿ 5 ವರ್ಷ ಇರಲಿದ್ದು, ಪ್ರತಿಮಾ ಅವರು 2026ರ ಮಾರ್ಚ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಡಾ.ವೈ.ಸಿ. ಜನಾರ್ದನ ರೆಡ್ಡಿ ಅವರನ್ನು ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ವರ್ಷ ಅ.4ರಂದು ಡಾ.ಬಿ.ಎನ್. ಗಂಗಾಧರ್ ನಿವೃತ್ತರಾದ ಬಳಿಕ ಸಂಸ್ಥೆಗೆ ಪೂರ್ಣಾವಧಿ ನಿರ್ದೇಶಕರು ಇರಲಿಲ್ಲ. ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಜಿ. ಗುರುರಾಜ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು.
ಕೇಂದ್ರ ಆರೋಗ್ಯ ಸಚಿವಾಲಯವು ದೆಹಲಿಯ ಏಮ್ಸ್‌ನ (ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ನರವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ವಿ. ಪದ್ಮಾ ಶ್ರೀವಾಸ್ತವ ಅವರನ್ನು ಪೂರ್ಣಾವಧಿ ನಿರ್ದೇಶಕರನ್ನಾಗಿ ನೇಮಿಸಿತ್ತು. ಅವರು ಅಧಿಕಾರ ವಹಿಸಿಕೊಂಡಿರಲಿಲ್ಲ. ಹೀಗಾಗಿ, ಗುರುರಾಜ್ ಅವರೇ ನಿರ್ದೇಶಕ ಹುದ್ದೆಯಲ್ಲಿ ಮುಂದುವರೆದಿದ್ದರು. ಕೆಲ ದಿನಗಳ ಹಿಂದೆ ಅವರು ನಿವೃತ್ತರಾಗಿದ್ದರಿಂದ ಹಂಗಾಮಿ ನಿರ್ದೇಶಕರ ಸ್ಥಾನಕ್ಕೆ ಡಾ. ಸತೀಶ್ ಚಂದ್ರ ಗಿರಿಮಾಜಿ ಅವರನ್ನು ನೇಮಕ ಮಾಡಲಾಗಿತ್ತು.