Breaking News
Home / ರಾಜಕೀಯ / ಕೆಎಸ್‌ಆರ್‌ಟಿಸಿ ಹೆಸರು ಕರ್ನಾಟಕದಿಂದ ಕೈ ತಪ್ಪುವ ಆತಂಕ ಬೇಡ: ಡಿಸಿಎಂ ಸವದಿ

ಕೆಎಸ್‌ಆರ್‌ಟಿಸಿ ಹೆಸರು ಕರ್ನಾಟಕದಿಂದ ಕೈ ತಪ್ಪುವ ಆತಂಕ ಬೇಡ: ಡಿಸಿಎಂ ಸವದಿ

Spread the love

ಬೆಂಗಳೂರು:ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರು ಕರ್ನಾಟಕದಿಂದ ಕೈತಪ್ಪಿದೆ ಎಂಬ ಆತಂಕ ಪಡಬೇಕಾಗಿಲ್ಲ. ಕೇರಳ ಸರ್ಕಾರವು ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ನಮ್ಮ ಕರ್ನಾಟಕ ಸರ್ಕಾರವು ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಶ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರನ್ನು ಮುಂದೆಯೂ ಕರ್ನಾಟಕವು ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದು ಅವರು ಕಟುವಾಗಿ ಪ್ರತ್ಯುತ್ತರ ನೀಡಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಎಂದು ಬಳಸುವಂತಿಲ್ಲವೆಂದು, ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿರವರು
ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ಇಂದು ಕೂಲಂಕುಶವಾಗಿ ಪರಿಶೀಲಿಸಲಾಗಿದ್ದು, ಇದು ವಾಸ್ತವಕ್ಕೆ ದೂರವಾದ ಸಂಗತಿಯಾಗಿದೆ ಎಂಬುದು ದೃಢಪಟ್ಟಿದೆ. ಆದ್ದರಿಂದ ಅನವಶ್ಯಕ ಅಪಪ್ರಚಾರಕ್ಕೆ ಯಾರೂ ಕಿವಿಕೊಡಬಾರದು ಎಂದು ಸವದಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ನಮ್ಮ ಸಾರಿಗೆ ಸಂಸ್ಥೆಗೆ ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟರಿ ರವರಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶ ಇಂದಿನವರೆಗೂ ಬಂದಿಲ್ಲ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆ ಎಸ್ ಆರ್ ಟಿ ಸಿ ಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣಪತ್ರದ ವಿರುಧ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ ಎಂಬುದು ತಿಳಿದುಬಂದಿದೆ.

ಏತನ್ಮಧ್ಯೆ, ಸದರಿ ಮಂಡಳಿಯನ್ನು ದಿ.4.04.2021 ರ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಲಾಗಿದೆ. ಇಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿಯ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ ಮತ್ತು ಕೆಎಸ್‌ಆರ್‌ಟಿಸಿಯು ತನಗೆ ನೀಡಲಾಗಿರುವ ಟ್ರೇಡ್‌ಮಾರ್ಕ್‌ಗಳನ್ನು ಬಳಸಲಾಗುವುದಿಲ್ಲ ಎಂಬ ಸುದ್ದಿ-ವರದಿಗಳು ಸತ್ಯಕ್ಕೆ ದೂರವಾಗಿದೆ ಮತ್ತು ಇದನ್ನು ಕಾನೂನಾತ್ಮಕವಾಗಿ ಒಪ್ಪಲಾಗದು ಎಂದು ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಕಾನೂನಾತ್ಮಕ ಅಡೆತಡೆಯಾಗಲಿ ಅಥವಾ ನಿಷೇಧವಾಗಲೀ ಇಲ್ಲ ಎಂಬುದನ್ನು ಗಮನಿಸಬೇಕು ಎಂದು ಸವದಿಯವರು ಸಮಜಾಯಿಷಿ ನೀಡಿದ್ದಾರೆ.
ಕೇರಳ ಎಸ್‌ಆರ್‌ಟಿಸಿಯು, ಕೆಎಸ್‌ಆರ್‌ಟಿಸಿ, ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿನ ಸುದ್ದಿ ಪ್ರಕಟವಾಗಿದೆ.

ಒಂದು ವೇಳೆ ಅಂತಹ ನೋಟಿಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಾವು ಪ್ರಸ್ತುತ ನಮ್ಮ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ. ಆದ್ದರಿಂದ ಊಹಾಪೋಹದ ಯಾವುದೇ ವದಂತಿಯನ್ನು ನಂಬಿ ಆತಂಕಪಡಬೇಕಾಗಿಲ್ಲ ಎಂದು ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ