Breaking News

ತಂದೆ ತಾಯಿ ಕಳೆದುಕೊಂಡ ಮಕ್ಕಳ ಜೊತೆ ನಾವಿದ್ದೇವೆ: ಶಶಿಕಲಾ ಜೊಲ್ಲೆ

Spread the love

ಬೆಂಗಳೂರು: ಕೋವಿಡ್‍ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ದುಃಖದಲ್ಲಿ ಭಾಗಿಯಾಗಿ, ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ. ಅಂತಹ ಮಕ್ಕಳೊಂದಿಗೆ ನಾವಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.

ಕೋವಿಡ್-19ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಅವರನ್ನು ಪಾಲನೆ ಮಾಡುತ್ತಿರುವ ಪಾಲಕರ ಜೊತೆಗೆ ಗೂಗಲ್ ಮೀಟ್ ಮೂಲಕ ವೀಡಿಯೊ ಸಂವಾದ ನಡೆಸಿ, ಅವರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿ, ಅವರ ಮನಸ್ಸಿನ ನೋವು, ಸಮಸ್ಯೆಗಳನ್ನು ಮನಗಂಡು, ಸರ್ಕಾರದಿಂದ ನೀಡಲಾಗುವ ನೆರವಿನ ಕುರಿತು ಮಾಹಿತಿ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ 19 ಮಕ್ಕಳ ಜೊತೆಗೆ ಸಚಿವರು ಸುಮಾರು ಮೂರು ಗಂಟೆಗಳ ಕಾಲ ಪ್ರತಿಯೊಬ್ಬ ಮಗುವಿನ ಜೊತೆಗೂ ವೈಯಕ್ತಿಕವಾಗಿ ಚರ್ಚೆ ನಡೆಸಿ, ತಂದೆ ತಾಯಿಗಳನ್ನು ಕಳೆದುಕೊಂಡ ಮಕ್ಕಳ ಪೋಷಕರ ಕಷ್ಟಗಳ ಬಗ್ಗೆ ಮಾಹಿತಿ ಪಡೆದರು.

ಕಷ್ಟದ ಸಂದರ್ಭದಲ್ಲಿ ಧೃತಿಗೆಡದೆ ಜೀವನದ ಸವಾಲುಗಳನ್ನು ಎದುರಿಸಿ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬೆಳೆಯುವಂತೆ ಮಕ್ಕಳಿಗೆ ಸಚಿವರು ಕಿವಿ ಮಾತು ಹೇಳಿದರು. ಈ ಕುರಿತು ಮಾತನಾಡಿರುವ ಸಚಿವರು ಪೋಷಕರನ್ನು ಕಳೆದುಕೊಂಡ ಆ ಮಕ್ಕಳ ನೋವು ಕಂಡು ಮನಸ್ಸು ಭಾರವಾಯಿತು. ಹೀಗಾಗಿ ಇಂತಹ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಪೋಷಕರು ಇಲ್ಲ ಎಂಬ ಕೊರಗು ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಬಾಲ ಸೇವಾ ಯೋಜನೆಯನ್ನು ಘೋಷಿಸಿದ್ದಾರೆ. ಸರ್ಕಾರದಿಂದ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಅತೀ ಶೀಘ್ರದಲ್ಲಿ ನೀಡುತ್ತೇವೆ. ಮುಂದೇನಾದರೂ ಅಗತ್ಯವಿದ್ದಲ್ಲಿ ಅಗತ್ಯ ನೆರವು ನೀಡಲು ಸರ್ಕಾರ ಸದಾ ಸಿದ್ಧವಿದೆ ಎಂದು ಹೇಳಿದರು.

ಜಾಗೃತಿ ಕಾರ್ಯಕ್ರಮ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬಾಲ ಸೇವಾ ಯೋಜನೆಯ ಬಗ್ಗೆ ಪ್ರತಿ ಗ್ರಾಮ ಮಟ್ಟದಲ್ಲಿಯೂ ಎಲ್ಲರಿಗೂ ತಲುಪುವಂತೆ ಮಾಡಲು ಎಲ್ಲ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ಒದಗಿಸಲು ತೀರ್ಮಾನಿಸಲಾಗಿದೆ.

ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಘೋಷಣೆ ಮಾಡಿರುವ ಮಾಸಿಕ 3,500 ರೂ. ನೀಡುವುದು. 10 ವರ್ಷದ ಒಳಗಿನ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ಹಾಗೂ 21 ವರ್ಷ ಪೂರೈಸಿರುವ ತಂದೆ ತಾಯಿಗಳನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ಸಹಾಯಧನವನ್ನು ನೇರವಾಗಿ ಅವರ ಅಕೌಂಟ್‍ಗೆ ತಲುಪಿಸಲು ಇಲಾಖೆಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆ ಅನುಷ್ಠಾನದಲ್ಲಿ ಯಾವುದೇ ರೀತಿಯ ಮಧ್ಯವರ್ತಿಗಳ ಹಾವಳಿಯಾಗದಂತೆ ಕ್ರಮ ವಹಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಪಲ್ಲವಿ ಆಕೃತಿ, ನೋಡಲ್ ಅಧಿಕಾರಿಗಳಾದ ಮೋಹನರಾಜ, ವಿವಿಧ ಜಿಲ್ಲೆಗಳ ಡಿ.ಸಿ.ಪಿ.ಓ. ಹಾಗೂ ಸಿ.ಡಿ.ಪಿ.ಓ ಅಧಿಕಾರಿಗಳು ಹಾಜರಿದ್ದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ