ಬೆಂಗಳೂರು, ಮೇ. 26: ನೆರೆ ರಾಜ್ಯ ಕೇರಳದಿಂದ ರೆಮ್‌ಡಿಸಿವಿರ್ ಚುಚ್ಚು ಮದ್ದು ತಂದು ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂವರು ದಂಧೆಕೋರರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ದೊಡ್ಡ ತೋಗೂರು ನಿವಾಸಿಗಳಾದ ಸಂಜೀವ್ ಕುಮಾರ್, ಪ್ರತೀಕ್ ಹಾಗೂ ಅಭಿಜಿತ್ ಬಂಧಿತರು. ಕೊರೊನಾ ಸೋಂಕಿತರಿಗೆ ಬಳಸುವ ರೆಮ್‌ಡಿಸಿವಿರ್‌ಗೆ ರಾಜ್ಯದಲ್ಲಿ ಇರುವ ಬಹು ಬೇಡಿಕೆಯನ್ನು ಅರಿತಿದ್ದ ಮೂವರು ಕೇರಳದಲ್ಲಿ ನೂರಾರು ರೆಮ್‌ಡಿಸಿವಿರ್ ಚುಚ್ಚು ಮದ್ದು ವಯಲ್‌ಗಳನ್ನು ತಂದಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತ ಸಂಬಂಧಿಕರನ್ನು ಭೇಟಿ ಮಾಡಿ ತಲಾ 10 ಸಾವಿರ ರೂ. ನಂತೆ ಮಾರಾಟ ಮಾಡುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಪಡೆದ ಬಸವೇಶ್ವರನಗರ ಪೊಲೀಸರು, ರೆಮ್‌ಡಿಸಿವಿರ್ ಖರೀದಿ ಮಾಡುವ ಸೋಗಿನಲ್ಲಿ ಹೋಗಿದ್ದಾರೆ. ಹತ್ತು ಸಾವಿರ ರೂಪಾಯಿ ಹಣ ಕೊಟ್ಟು ಅಭಿಜಿತ್ ಮೂಲಕ ಇಂಜೆಕ್ಷನ್ ಪಡೆದುಕೊಂಡಿದ್ದಾರೆ. ಆತನು ನೀಡಿದ ಮಾಹಿತಿ ಮೇರೆಗೆ ಸಂಜೀವ್ ಕುಮಾರ್ ಮತ್ತು ಪ್ರತೀಕ್‌ನನ್ನು ಬಂಧಿಸಿದ್ದು, ಆರೋಪಿತರಿಂದ 25 ವಯಲ್ ಇಂಜೆಕ್ಷನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ.ಪಾಟೀಲ್ ಶ್ಲಾಘಿಸಿದ್ದಾರೆ.
Laxmi News 24×7