Breaking News

ಕೋವಿಡ್‌ ಪೀಡಿತ ತಂದೆಯ ಮೃತದೇಹ ಸಾಗಾಟಕ್ಕೂ ಲಂಚದ ಹಣ: ಸಂಕಟ ಹಂಚಿಕೊಂಡ ನೃತ್ಯಪಟು

Spread the love

ಬೆಂಗಳೂರು: ಕೋವಿಡ್‌ ಪರೀಕ್ಷೆಯಿಂದ ಹಿಡಿದು ಮರಣ ಪ್ರಮಾಣಪತ್ರ ಪಡೆಯುವವರೆಗೆ.. ಹೆಜ್ಜೆ ಹೆಜ್ಜೆಗೂ ಸುಲಿಗೆ ಮಾಡುತ್ತಾರೆ. ಆಸ್ಪತ್ರೆಗೆ ದಾಖಲಾಗುವುದರಿಂದ ಹಿಡಿದು ಹೆಣ ಒಯ್ಯುವ ವಾಹನದವರೆಗೂ ಎಲ್ಲೆಡೆ ಚೆಲ್ಲಬೇಕು ದುಡ್ಡು. ಸಾಲ ಮಾಡಿ ₹ 4 ಲಕ್ಷ ಖರ್ಚು ಮಾಡಿದರೂ ತಂದೆಯನ್ನು ಉಳಿಸಿಕೊಳ್ಳಲಾಗಲಿಲ್ಲ.

ಕೋವಿಡ್‌ನಿಂದಾಗಿ ತಂದೆಯನ್ನು (ಮಂಜುನಾಥ ಆರಾಧ್ಯ, 52) ಕಳೆದುಕೊಂಡ ಕರುಣಾಜನಕ ಕತೆಯನ್ನು ಆನೇಕಲ್‌ನ ಚೇತನ್‌ ಆರಾಧ್ಯ ಬಿಚ್ಚಿಟ್ಟದ್ದು ಹೀಗೆ. ಮಧುಮೇಹ ಉಲ್ಬಣಗೊಂಡ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದ ತಂದೆಗೆ ಕೋವಿಡ್‌ ಕಾಣಿಸಿಕೊಂಡಿದ್ದು, ನಂತರ ಐಸಿಯು ಹಾಸಿಗೆಗಾಗಿ ಅಲೆಯಬೇಕಾಗಿ ಬಂದಿದ್ದು, ತಂದೆ ಸತ್ತ ಬಳಿಕ ಹೆಣ ಸಾಗಾಟಕ್ಕೂ ಲಂಚ ನೀಡಿದ್ದು… ಹೀಗೆ ಸುಮಾರು ಒಂದು ವಾರ ಕಾಲ ಅನುಭವಿಸಿದ ತಳಮಳಗಳೆಲ್ಲವನ್ನೂ ವಿಡಿಯೊ ಮಾಡಿ ಈ ಯುವಕ ಎಳೆ ಎಳೆಯಾಗಿ ಹೇಳಿಕೊಂಡಿದ್ದಾರೆ. ‘ಪ್ರಜಾವಾಣಿ’ ಜೊತೆಗೂ ತಮ್ಮ ನೋವಿನ ಅನುಭವಗಳನ್ನು ಹಂಚಿಕೊಂಡ ಚೇತನ್‌, ‘ಕೋವಿಡ್‌ ಕಾಲದಲ್ಲಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕರಾಳ ವ್ಯವಸ್ಥೆಯ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವುದು ಅತ್ಯಲ್ಪ ಮಾತ್ರ. ಕೋವಿಡ್ ಪೀಡಿತರನ್ನು ಅವರ ಕುಟುಂಬದವರನ್ನು ಎಷ್ಟೆಲ್ಲಾ ಸತಾಯಿಸಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಸರ್ಕಾರ ಎಚ್ಚೆತ್ತುಕೊಂಡು ವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದರು.

ತಾವು ಅನುಭವಿಸಿದ ಯಾತನೆಗಳನ್ನು ಚೇತನ್‌ ವಿವರಿಸಿದ್ದು ಹೀಗೆ…

‘ಏ. 28ರಂದು ತಂದೆಗೆ ಮಧುಮೇಹ ಉಲ್ಬಣಗೊಂಡಿತ್ತು. ಅವರನ್ನು ಆನೇಕಲ್‌ನ ಗಂಗಾ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿ ವಿಶೇಷ ವಾರ್ಡ್‌ಗೆ ದಿನಕ್ಕೆ ₹ 3,500 ದರವಿದೆ. ಚಿಕಿತ್ಸೆ ವೇಳೆ ತಂದೆಗೆ ಬಿಕ್ಕಳಿಕೆ ಶುರುವಾಯಿತು. ಎರಡು ದಿನಗಳ ಬಳಿಕವೂ ಕಡಿಮೆ ಆಗಲಿಲ್ಲ. ಏ 30ರಂದು ಕೋವಿಡ್‌ ಪರೀಕ್ಷೆ ಮಾಡಿಸಿದರು. ಪರೀಕ್ಷೆ ಮಾಡಿದ ವ್ಯಕ್ತಿ ಬಳಿ ಇದ್ದ ಕಿಟ್‌ನಲ್ಲಿ ‘ಇದು ಮಾರಾಟಕ್ಕಲ್ಲ’ ಎಂದು ಬರೆದಿತ್ತು. ಆದರೂ ನನ್ನಿಂದ ಅದಕ್ಕೆ ₹ 2500 ಪಡೆದರು.’

‘ಮೇ 1ರವರೆಗೂ ಫಲಿತಾಂಶ ಬರಲಿಲ್ಲ. ಅಷ್ಟರಲ್ಲಿ ತಂದೆಗೆ ಕೆಮ್ಮು ಶುರುವಾಯಿತು. ಫಲಿತಾಂಶ ಬರುವರೆಗೆ ಕಾಯಲಾಗದು. ಸಿಟಿ ಸ್ಕ್ಯಾನ್‌ ಮಾಡಿಸಿ ಎಂದು ವೈದ್ಯರು ಸೂಚಿಸಿದರು. ಹೊಸೂರಿನಲ್ಲಿ ಸಿಟಿ ಸ್ಕ್ಯಾನ್‌ ಮಾಡಿಸಿದೆವು. ಕೋವಿಡ್‌ ಇರುವುದರಿಂದ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬೇಕು. ದಿನಕ್ಕೆ ₹ 25 ಸಾವಿರ ಖರ್ಚಾಗುತ್ತದೆ ಎಂದರು. ಅದಕ್ಕೂ ಒಪ್ಪಿದೆ. ಮೇ 3 ಆದರೂ ಕೋವಿಡ್‌ ಪರೀಕ್ಷೆಯ ಫಲಿತಾಂಶ ಬರಲಿಲ್ಲ. ಆದರೆ‌, ತಂದೆಯ ಸ್ಥಿತಿ ತುಂಬಾ ಗಂಭೀರ ಹಂತ ತಲುಪಿತ್ತು. ಅವರನ್ನು ದೊಡ್ಡ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನಿಡಿದರು.’

ಮೂರು ಬಿ.ಯು.ನಂಬರ್ ಕೊಟ್ಟರು!

ಮೇ 3ರಂದು ಮಧ್ಯಾಹ್ನ ತಂದೆಗೆ ಕೋವಿಡ್‌ ದೃಢಪಟ್ಟ ವರದಿ ಬಂತು. ಸಂಜೆ 6 ಗಂಟೆಯಾದರೂ ಬಿ.ಯು.ನಂಬರ್‌ ಸಿಗಲಿಲ್ಲ. ಅದಿಲ್ಲದೇ ಬೇರೆ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆ ಸಿಗುವುದು ಕಷ್ಟ. ಮರುದಿನ ಯಾರೋ ಕರೆ ಮಾಡಿ ‘ಮಂಜುನಾಥ ಆರ್‌.’ ಹೆಸರಿನ ಬಿ.ಯು ನಂಬರ್‌ ಕೊಟ್ಟರು. ಅದು ನನ್ನಪ್ಪನ ಹೆಸರಲ್ಲ ಎಂದರೂ ಕೇಳಲಿಲ್ಲ. ಆ ನಂಬರ್‌ ಇಟ್ಟುಕೊಂಡು ಹಾಸಿಗೆ ಹುಡುಕುತ್ತಿದ್ದಾಗ ಇನ್ನೊಬ್ಬರು ಕರೆ ಮಾಡಿ ‘ಮಂಜುನಾಥ್‌ ಎಲ್‌’ ಅವರ ಬಿ.ಯು ನಂಬರ್‌ ಕೊಟ್ಟರು. ಅದು ನನ್ನ ತಂದೆಯದಲ್ಲ ಎಂದರೂ ಕೇಳಲಿಲ್ಲ. ಬಳಿಕ ಆಸ್ಪತ್ರೆಯವರಲ್ಲಿ ಕೇಳಿದಾಗ, ‘ಅವೆರೆಡೂ ಅಲ್ಲ. ನಿಮ್ಮ ತಂದೆಯ ಬಿ.ಯು ನಂಬರ್‌ ಇದು’ ಎಂದು ಮತ್ತೊಂದು ನಂಬರ್‌ ಕೊಟ್ಟರು.’

‘ಅಷ್ಟರಲ್ಲಿ ತಂದೆಯ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಶೇ 65ಕ್ಕೆ ಇಳಿದಿತ್ತು. ಎಲ್ಲೂ ಐಸಿಯು ಹಾಸಿಗೆ ಸಿಗಲೇ ಇಲ್ಲ. ಅಪ್ಪ ಏನೂ ತಿನ್ನಲಿಕ್ಕಾಗದ ಸ್ಥಿತಿ ತಲುಪಿದ್ದರು. ಮೇ 4ರಂದು ಸಂಜೆ ನಾರಾಯಣ ಹೃದಯಾಲಯದಲ್ಲಿ ಒಂದು ಹಾಸಿಗೆ ಹಂಚಿಕೆ ಆಯಿತು. ಆಂಬುಲೆನ್ಸ್‌ಗೆ (108) ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲೇ ಇಲ್ಲ. ಬಳಿಕ ಖಾಸಗಿ ಆಂಬುಲೆನ್ಸ್‌ ಸಿಕ್ಕಿತು. ನಾರಾಯಣ ಹೃದಯಾಲಯಕ್ಕೆ ರಾತ್ರಿ 10 ಗಂಟೆಗೆ ತಲುಪಿದೆವು. ದಾಖಲಿಸಿಕೊಳ್ಳಲು ಒಪ್ಪದ ಅವರು ಸರ್ವರ್‌ ಸ್ಲೋ ಇದೆ, ನಾಳೆ ಬನ್ನಿ ಎಂದರು. ತಂದೆಯ ದೇಹಸ್ಥಿತಿ ಗಂಭೀರವಾಗಿದೆ. ದಯವಿಟ್ಟು ಪರೀಕ್ಷಿಸಿ ಎಂದಾಗ ವೈದ್ಯರೊಬ್ಬರು ಬಂದು ತಪಾಸಣೆ ನಡೆಸಿದರು. ರಕ್ತದಲ್ಲಿ ಆಮ್ಲಜನಕದ ಮಟ್ಟ 65ಕ್ಕೆ ಇಳಿದಿದೆ. ಇಲ್ಲಿ ದಾಖಲಿಸಲು ಆಗದು. ಬೇರೆಡೆ ಕರೆದುಕೊಂಡು ಹೋಗಿ ಎಂದರು. ಮತ್ತೆ ಆನೇಕಲ್‌ನ ಗಂಗಾ ಆಸ್ಪತ್ರೆಗೆ ಮರಳಿ ಕರೆದೊಯ್ದೆವು. ಪುಣ್ಯಕ್ಕೆ ಅಲ್ಲಿ ಒಂದು ಐಸಿಯು ಖಾಲಿ ಇತ್ತು. ಅವರು ಆಮ್ಲಜನಕ ಒದಗಿಸಿದರು. ಅಷ್ಟರಲ್ಲಿ ರಾತ್ರಿ 12 ಗಂಟೆ ಆಗಿತ್ತು. ಮೇ 5ರ ಮುಂಜಾನೆ 2.30ಕ್ಕೆ ತಂದೆ ತೀರಿಕೊಂಡರು’.

ಶವ ಸಂಸ್ಕಾರಕ್ಕೆ ₹ 30 ಸಾವಿರ ಪ್ಯಾಕೇಜ್!

‘ಆಂಬುಲೆನ್ಸ್‌ನಲ್ಲಿ ಶವ ಒಯ್ದು ಪೂಜಾರಿಯ್ನು ಕರೆಸಿ ಅಂತಿಮ ಕಾರ್ಯ ನಡೆಸಲು ₹ 30 ಸಾವಿರ ಪ್ಯಾಕೇಜ್‌ ಎಂದು ಒಬ್ಬರು ತಿಳಿಸಿದರು. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ದೇಹ ಇಡಲು 2 ಸಾವಿರ ಪಡೆದರು. ದೇಹ ಎತ್ತಿ ಇಡಲಿಕ್ಕೆ ನಾಲ್ಕು ಮಂದಿಗೆ ತಲಾ 2 ಸಾವಿರ ಕೊಟ್ಟಿದ್ದೇನೆ. ಹೆಣ ಸಾಗಿರುವ ವಾಹನಕ್ಕೆ ಕರೆ ಮಾಡಿದರೂ ಸಿಗಲಿಲ್ಲ. ಬಳಿಕ ಒಂದು ವಾಹನ ಸಿಕ್ಕಿತು. ಆನೇಕಲ್‌ನಿಂದ ಮಾಗಡಿ ರಸ್ತೆ ಬಳಿಯ ತಾವರೆಕೆರೆಯಲ್ಲಿ ತಂದೆಯ ಅಂತ್ಯಕ್ರಿಯೆ ನಡೆಸಲು ಒಯ್ದೆವು. ಅಲ್ಲಿ ವಾಹನದ ಚಾಲಕ ₹ 4ಸಾವಿರ ಪಡೆದ. ಸ್ಮಶಾನದಲ್ಲಿ ನೋಡಿದರೆ ಕೋವಿಡ್‌ನಿಂದ ಸತ್ತವರ ಅಂತ್ಯಕ್ರಿಯೆ ಉಚಿತ ಎಂದು ಬರೆದಿತ್ತು. ಈ ಬಗ್ಗೆ ಗಲಾಟೆ ಮಾಡಿದರೂ ಪ್ರಯೋಜನವಾಗಲಿಲ್ಲ.’

ಜಾತಿಯವರೂ ಕೈಬಿಟ್ಟರು…

‘ನನ್ನಪ್ಪ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷರು. ಈ ಒಕ್ಕೂಟದ ಸದಸ್ಯರಿಗೆ ಕರೆ ಮಾಡಿದೆ. ಕೋವಿಡ್‌ನಿಂದ ಸತ್ತವರನ್ನು ಹೂಳುವುದಕ್ಕೆ ಸಮುದಾಯದ ಸ್ಮಶಾನದಲ್ಲಿ ಅವಕಾಶವಿಲ್ಲ ಎಂದು ಕೈಚೆಲ್ಲಿದರು. ತಂದೆಯ ದೇಹವನ್ನು ಮಾಗಡಿ ರಸ್ತೆಯ ಸ್ಮಶಾನಕ್ಕೆ ಕೊಂಡೊಯ್ಯುವಾಗ ಸ್ವಾಮೀಜಿಯೊಬ್ಬರು ಕರೆ ಮಾಡಿ, ಲಿಂಗಾಯತರ ಸಮಾಧಿಯಲ್ಲಿ ಮೃತದೇಹದ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದರು. ₹ 10 ಸಾವಿರ ನೀಡುವುದಾಗಿಯೂ ಹೇಳಿದರು. ಮರಳುವ ಸ್ಥಿತಿಯಲ್ಲಿ ನಾನಿರಲಿಲ್ಲ.

ಆನೇಕಲ್‌ ಮುನಿಸಿಪಲ್‌ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಪಡೆಯುವುದಕ್ಕೂ ಸರದಿ ಸಾಲುತ್ತಿತ್ತು. ಅಲ್ಲಿ ಎಷ್ಟು ಪ್ರತಿ ಬೇಕು ಎಂದರು. ಮೂರು ಪ್ರತಿಗೆ ₹ 600 ಕೊಟ್ಟೆ. ಅಲ್ಲಿ ಸಾಲಿನಲ್ಲಿ ನಿಂತವರೊಬ್ಬರು ‘ಪ್ರಧಾನ ಮಂತ್ರಿ ಜೀವಜ್ಯೋತಿ ಯೋಜನೆ’ಯ ಮಾಹಿತಿ ನೀಡಿದರು. ‘ಕೋವಿಡ್‌ನಿಂದ ಸತ್ತವರಿಗೆ ಈ ಯೋಜನೆ ಅಡಿ ₹ 2 ಲಕ್ಷ ನೀಡುತ್ತಾರೆ’ ಎಂದರು. ಅರ್ಜಿ ಹಾಕಲು ಆನೇಕಲ್‌ ಅಂಚೆ ಕಚೇರಿಗೆ ಹೋದರೆ ಅಲ್ಲೂ ಸರದಿ ಸಾಲು. ಈ ಯೋಜನೆಯಲ್ಲೂ ಜಾತಿ ವ್ಯವಸ್ಥೆ. ಲಿಂಗಾಯಿತರು ಸತ್ತರ ಕೇವಲ ₹ 20 ಸಾವಿರ ಸಿಗಲಿದೆ ಎಂದು ಅಲ್ಲಿ ತಿಳಿಸಿದರು. ನಾವು ಮನುಷ್ಯರಲ್ವಾ.. ಸರಿ ಆಗಲಿ ಎಂದು ಅರ್ಜಿ ನೀಡಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು ಎಂದರು. ಅದನ್ನು ನೀಡಿದೆ. ಅದು ತಾಯಿ ಹೆಸರಿನಲ್ಲಿ ಮಾಡಿಸಿಕೊಡಬೇಕು ಎಂದರು. ಅದನ್ನು ತ್ವರಿತವಾಗಿ ಮಾಡಿಸಲು ಏಜೆಂಟರಿಗೆ ಮತ್ತೆ 500 ಕೋಡಬೇಕಾಯಿತು. ಇಷ್ಟೆಲ್ಲ ಆಗಿ ಕೊಟ್ಟ ಮೇಲೆ, ‘ಹಣ ಕೈಸೇರಲು ಆರು ತಿಂಗಳಾಗುತ್ತದೆ. ಬ್ಯಾಂಕ್‌ ಖಾತೆಯಲ್ಲಿ ₹ 20 ಸಾವಿರಕ್ಕಿಂತ ದುಡ್ಡಿರಬಾರರು’ ಎಂದರು.

‘ನೃತ್ಯಪಟುವಾಗಿರುವ ನನಗೆ ಈಗ ಯಾವ ಕೆಲಸವೂ ಇಲ್ಲ. ಯಾವುದೇ ಕಾರ್ಯಕ್ರಮಗಳೂ ನಡೆಯುತ್ತಿಲ್ಲ. ಶೂಂಟಿಂಗ್‌ಗೂ ಅವಕಾಶ ಇಲ್ಲ. ನೆರವಾಗಲು ಗೆಳೆಯರು ಮುಂದೆ ಬಂದರೂ, ಲಾಕ್‌ಡೌನ್‌ ಇರುವುದರಿಂದ ದುಡ್ಡು ಪಡೆಯಲು ಬೇರೆಡೆ ಹೋಗಲಿಕ್ಕೂ ಆಗುತ್ತಿಲ್ಲ’ ಎಂದು ಚೇತನ್‌ ನಿಟ್ಟುಸಿರು ಬಿಟ್ಟರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ