ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೇಲೆ ಕೊರೊನಾ ಕರಿ ನೆರಳು ಬೀರಿದೆ. ಕೊರೊನಾ ಆತಂಕದಲ್ಲೇ ಕೆಲಸ ಮಾಡುತ್ತಿರುವ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ನೌಕರರು ಕೊರೊನಾ 2ನೇ ಅಲೆಯಿಂದಾಗಿ ಬೆಚ್ಚಿಬಿದ್ದಿದ್ದಾರೆ. ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆಯಿಂದಾಗಿ ನೌಕರರಲ್ಲಿ ಕೊರೊನಾ ಆತಂಕ ಇನ್ನೂ ಅಧಿಕವಾಗಿದೆ.
ಕೊರೊನಾ ಪಾಸಿಟಿವ್ ಆದ ಆರ್‌ಟಿಪಿಎಸ್‌ನ ನಾಲ್ವರು ಉದ್ಯೋಗಿಗಳು ಕೊವಿಡ್ ಗೆ ಬಲಿಯಾಗಿದ್ದಾರೆ. ಒಟ್ಟು ಒಂದು ತಿಂಗಳ ಅಂತರದಲ್ಲಿ ಐದು ಮಂದಿ ನೌಕರರು ಕೊವಿಡ್ ಗೆ ಬಲಿಯಾಗಿದ್ದಾರೆ. ಆರ್‌ಟಿಪಿಎಸ್‌ನ 90 ಕ್ಕೂ ಅಧಿಕ ಉದ್ಯೋಗಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. ಕುಟುಂಬಸ್ಥರು ಸೇರಿ 200 ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿದೆ. ಇದರಿಂದಾಗಿ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಉದ್ಯೋಗಿಗಳಲ್ಲಿ ಕೊರೊನಾ ಆತಂಕ ಅಧಿಕಗೊಂಡಿದೆ.
50% ರಷ್ಟು ರೊಟೇಶನ್ ಮಾದರಿ ಜಾರಿ ತರಲು ಉದ್ಯೋಗಿಗಳು ಆಗ್ರಹ; ಆದರೂ ನೌಕರರ ಸಂಘದ ಮನವಿಗೂ ಆಡಳಿತ ಮಂಡಳಿ ಕೇರ್ ಮಾಡಿಲ್ಲ
ಕೊರೊನಾ ಸೋಂಕು ಹೆಚ್ಚಾಗಿದ್ರೂ ಕಂಪನಿಯಲ್ಲಿ ಬಯೋಮೆಟ್ರಿಕ್ ಬಳಕೆ ಮಾಡಲಾಗುತ್ತಿದೆ. ಸರ್ಕಾರದ ಆದೇಶ ಇದ್ರೂ 100% ರಷ್ಟು ಉದ್ಯೋಗಿಗಳು ನಿತ್ಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಆತಂಕದಿಂದಾಗಿ 50% ರಷ್ಟು ರೊಟೇಶನ್ ಮಾದರಿ ಜಾರಿ ತರಲು ಉದ್ಯೋಗಿಗಳು ಆಗ್ರಹಿಸುತ್ತಿದ್ದಾರೆ. ಆರ್‌ಟಿಪಿಎಸ್ ನೌಕರರ ಸಂಘದಿಂದ ಆಡಳಿತ ಮಂಡಳಿಗೆ ಮನವಿಯನ್ನೂ ಸಲ್ಲಿಸಲಾಗಿದೆ. ಆದರೂ ನೌಕರರ ಸಂಘದ ಮನವಿಗೂ ಆಡಳಿತ ಮಂಡಳಿ ಕೇರ್ ಮಾಡಿಲ್ಲ. ಆಡಳಿತ ಮಂಡಳಿಯ ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ನೌಕರರಲ್ಲಿ ಹೆಚ್ಚಿದ ಕೊರೊನಾ ಆತಂಕ ಅಧಿಕಗೊಂಡಿದ್ದು, ಆಕ್ರೋಶವೂ ವ್ಯಕ್ತವಾಗಿದೆ.