ಬೆಂಗಳೂರು: ವಿಜಯಪುರ ಜಿಲ್ಲೆಯ ಜನರಿಗಾಗಿ ಶೀಘ್ರವೇ ಅತ್ಯಾಧುನಿಕ ಸೌಲಭ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು 100 ಬೆಡ್ ಗಳ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿ, ಶೀಘ್ರವಾಗಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದು ಆರೋಗ್ಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಸಲ್ಲಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ನೇತೃತ್ವದ ಜಿಲ್ಲೆಯ ಶಾಸಕರ ನಿಯೋಗ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ ಮತ್ತು ಹೊಸದಾಗಿ ಬ್ಲ್ಯಾಕ್ ಫಂಗಸ್ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದರ ಚಿಕಿತ್ಸೆಗೆ ಸೂಕ್ತವಾದ ತಜ್ಞ ವೈದ್ಯರ ಅವಶ್ಯಕತೆ ಇದ್ದು ಕೂಡಲೇ ತಜ್ಞ ವೈದ್ಯರನ್ನು ನೇಮಕ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಯವರ ಆದೇಶದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು ಖುದ್ದಾಗಿ ಅಧಿಕಾರಿಗಳ ಜೊತೆಗೆ ಕೋವಿಡ್‍ಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಹಾಗೂ ಹಲವು ಹಳ್ಳಿಗಳಿಗೆ ಭೇಟಿ ನೀಡಿದ ವೇಳೆ ಪ್ರಮುಖವಾಗಿ ವೆಂಟಿಲೇಟರ್ ಬೆಡ್, ಆಕ್ಸಿಜನ್ ಬೆಡ್ ಸಮಸ್ಯೆ, ಅಗತ್ಯ ತಾಂತ್ರಿಕ ಸಿಬ್ಬಂದಿಯ ಅವಶ್ಯಕತೆ, ರೆಮಡಿಸಿವಿರ್ ಲಸಿಕೆಗೆ ಹೆಚ್ಚಿನ ಬೇಡಿಕೆ ಪ್ರಮುಖವಾಗಿ ಕಂಡುಬಂದಿದ್ದು ಅದರ ವಾಸ್ತವ ವರದಿಯನ್ನು ಮಾನ್ಯ ಸಚಿವರಿಗೆ ನೀಡಲಾಯಿತು.
ಸಚಿವರಿಗೆ ಸಲ್ಲಿಸಿದ ಪ್ರಮುಖ ವಿಷಯಗಳು :
1. ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಆಸ್ಪತ್ರೆಯನ್ನು ಅಗತ್ಯ ಸಿಬ್ಬಂದಿಯೊಂದಿಗೆ 100 ಬೆಡ್ ಗಳ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿ, ಕೆಲಸ ಪ್ರಾರಂಭಿಸುವುದು.
2. ಜಿಲ್ಲೆಯ 13 ತಾಲೂಕುಗಳ ಪೈಕಿ 4 ತಾಲೂಕುಗಳಲ್ಲಿ ಮಾತ್ರ ತಾಲೂಕಾ ಆಸ್ಪತ್ರೆ ಇದ್ದು, ಉಳಿದ 9 ತಾಲೂಕಿನಲ್ಲಿ, ತಾಲೂಕಾ ಆಸ್ಪತ್ರೆ ಮಂಜೂರು ಮಾಡುವುದು ಹಾಗೂ ಶೀಘ್ರವೇ ಕಾಮಗಾರಿ ಪ್ರಾರಂಭಿಸುವುದು.
3. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೆಂಟಿಲೇಟರ್ ಬೆಡ್, ಆಕ್ಸಿಜನ್ ಬೆಡ್ ಹಾಗೂ ಸೂಕ್ತ ತಜ್ಞ ವೈದ್ಯರು ಹಾಗೂ ತಂತ್ರಜ್ಞರ ನೇಮಕ ಹಾಗೂ ಇವರಿಗೆ ಸೂಕ್ತವಾದ ತರಬೇತಿ ನೀಡುವುದು
4. ಎನ್ ಟಿ ಪಿ ಸಿ ಘಟಕದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ 100 ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು
ಎನ್ ಟಿ ಪಿ ಸಿ ಮುಖ್ಯಸ್ಥರಿಗೆ ಸೂಚನೆ ನೀಡುವುದು.
5.ಜಿಲ್ಲೆಯಲ್ಲಿ 81 ವಿವಿಧ ವೃಂದದ ತಜ್ಞ ವೈದ್ಯರ ಅವಶ್ಯಕತೆ ಇದ್ದು ಕೂಡಲೇ ವೈದ್ಯರನ್ನು ನೇಮಕ ಮಾಡಿಕೊಳ್ಳುವುದು.
6. ಸಿಂಧಗಿ ಹಾಗೂ ತಾಳಿಕೋಟೆ ತಾಲೂಕಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ನಿರ್ಮಿಸುವುದು.
7.ರೆಮಡಿಸಿವಿರ್ ಲಸಿಕೆಗೆ ಹೆಚ್ಚಿನ ಬೇಡಿಕೆಯಿದ್ದು, ಬೇಡಿಕೆ ನೀಗಿಸಲು ಅಗತ್ಯ ಲಸಿಕೆಗಳನ್ನು ಸರಬರಾಜು ಮಾಡುವುದರ ಕುರಿತು ಮನವಿ ಸಲ್ಲಿಸಲಾಯಿತು.
ಉಸ್ತುವಾರಿ ಸಚಿವರ ನೇತೃತ್ವದ ನಿಯೋಗದಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರುಣ್ ಶಹಾಪುರ, ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ್ ಹಾಜರಿದ್ದರು.