Breaking News
Home / ರಾಜಕೀಯ / ಖಾಕಿ ಪಡೆಯಿಂದ ಹಸಿದವರಿಗೆ ಊಟ, ಗದಗದಲ್ಲಿ ಅಲೆಮಾರಿಗಳ ಪಾಲಿಗೆ ಇವರೇ ಅನ್ನದಾತರು !

ಖಾಕಿ ಪಡೆಯಿಂದ ಹಸಿದವರಿಗೆ ಊಟ, ಗದಗದಲ್ಲಿ ಅಲೆಮಾರಿಗಳ ಪಾಲಿಗೆ ಇವರೇ ಅನ್ನದಾತರು !

Spread the love

ಗದಗ: ಅವರೆಲ್ಲಾ ಕೊರೊನಾ ವಾರಿಯರ್ಸಗಳು. ಸರಕಾರ ಜಾರಿ ಮಾಡಿರೋ ಲಾಕ್ಡೌನ್ ಯಶಸ್ಸು ಕಾಣ್ತಾಯಿದ್ರೆ ಇವರೇ ಕೇಂದ್ರ ಬಿಂದು. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಇತ್ತ ತಮ್ಮ ಹಸಿವನ್ನೂ ಲೆಕ್ಕಿಸದೇ ಜನರಿಗೆ ರಕ್ಷಕರಾದವರು. ಆದ್ರೆ ಅದೇ ಆರಕ್ಷಕರೀಗ ಇಲ್ಲಿ ಅನ್ನದಾತರೂ ಆಗಿದ್ದಾರೆ. ಲಾಠಿ ಹಿಡಿದ ಕೈಗಳು ಅನ್ನದ ಕೈಯನ್ನೂ ಹಿಡಿದಿವೆ. ಕೊರೊನಾ ಎಲ್ಲರ ಬದುಕನ್ನು ನುಂಗಿ ನೀರು ಕುಡಿತಿದೆ. ಅದರಲ್ಲೂ ಬಡ ಹಾಗೂ ನಿರ್ಗತಿಕರ ಪಾಡಂತೂ ಹೇಳತೀರದಾಗಿದೆ. ಅಲೆಮಾರಿ ಕುಟುಂಬಗಳ ಬದುಕು‌ ದುಸ್ಥರವಾಗಿದೆ. ದಿನದ ದುಡಿಮೆಯನ್ನೇ ನೆಚ್ಚಿರೋ ಅದೆಷ್ಟೋ ಕುಟುಂಬಗಳು ಲಾಕ್ಡೌನ್ ಸಮಯದಲ್ಲಿ ಜೀವನದ ಬಂಡಿ ಸಾಗಿಸಲು ಹರಸಾಹಸ ಪಡ್ತಿವೆ. ಆದ್ರೆ ಇಂಥಹ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ ಖಾಕಿ ಪಡೆ.

ಹೌದು, ಗದಗ ಜಿಲ್ಲೆ ಶಿರಹಟ್ಟಿ‌ ಪಟ್ಟಣದ ಪೊಲಿಸ್ ಸಿಬ್ಬಂದಿ ಪಟ್ಟಣದಲ್ಲಿ ನೆಲೆಸಿರೋ ಅಲೆಮಾರಿ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಲಾಠಿ ಹಿಡಿಯುವ ಕೈಗಳು ಅನ್ನದ ಕೈ ಹಿಡಿದು ನಿರ್ಗತಿಕರ ಹೊಟ್ಟೆ ತುಂಬಿಸುತ್ತಿವೆ. ಗದಗ ಜಿಲ್ಲಾ ಪೋಲಿಸ್ ಇಲಾಖೆ ನಿರ್ಗತಿಕರಿಗೆ ಆಹಾರ ನೀಡುವ ಮೂಲಕ ಮಾನವೀಯತೆ‌ ಕಾರ್ಯ ಕೈಗೊಂಡಿದ್ದು ಗದಗ ಎಸ್ಪಿ ಯತೀಶ್ ಎನ್ ಅವರ ಮಾರ್ಗದರ್ಶನದ ಮೇರೆಗೆ ಶಿರಹಟ್ಟಿ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿಗಳು ಬಡವರು, ವಲಸೆ ಬಂದ ಕಾರ್ಮಿಕರು ಸೇರಿದಂತೆ ನಿರ್ಗತಿಕರಿಗೆ ಅನ್ನ ಹಂಚುವ ಕಾರ್ಯದಲ್ಲಿ ತೊಡಗಿದ್ದಾರೆ. ಶಿರಹಟ್ಟಿ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ಹಲವಾರು ಬುಡಕಟ್ಟು ಜನಾಂಗದ ಕುಟುಂಬಗಳು ನೆಲೆಸಿವೆ. ದಿನನಿತ್ಯ ದುಡಿದ್ರೆ ಮಾತ್ರ ಇವರಿಗೆ ಅಂದಿನ ಊಟ. ಲಾಕ್ಡೌನ್ ಹಿನ್ನೆಲೆ ಇದೆಲ್ಲವೂ ನಿಂತು ಹೋಗಿದೆ. ಇದನ್ನರಿತಿರೋ ಶಿರಹಟ್ಟಿ ಖಾಕಿ ಪಡೆ ಇವರಿಗೆಲ್ಲ ಒಂದು ಹೊತ್ತಿನ ಊಟ ಕಲ್ಪಿಸುವುದರ ಮೂಲಕ ಹಸಿವನ್ನು ನೀಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಕಠಿಣ ಕರ್ಫ್ಯೂನ ಕರ್ತವ್ಯದಲ್ಲೂ ಸಹ ಬಿಡುವು ಮಾಡಿಕೊಂಡು ಇಂತಹ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ. ಇನ್ನು ಪೊಲಿಸ್ ಸಿಬ್ಬಂದಿ ಸಹ ಸದ್ಯದ ಪರಿಸ್ಥಿತಿಯ ವಾರಿಯರ್ಸ್ ಆಗಿ ಕೆಲಸ ಮಾಡ್ತಿದ್ದಾರೆ. ಆದರೆ ಅದನ್ನೆಲ್ಲ ಬದಿಗಿಟ್ಟು ಮಾನವೀಯತೆ ಕರ್ತವ್ಯಕ್ಕೆ ಅಣಿಯಾಗಿದ್ದಾರೆ.

ಸುಡು ಬಿಸಿಲೆನ್ನದೆ, ಮಳೆ, ಗಾಳಿ, ಚಳಿ ಎನ್ನದೇ ದಿನದ ಇಪ್ಪತ್ನಾಲ್ಕೂ ಗಂಟೆಯೂ ಕರ್ತವ್ಯ ನಿರ್ವಹಿಸೋ ಖಾಕಿ ಮನಸ್ಸುಗಳು ಸಹ ಹೆಮ್ಮಾರಿ ಆರ್ಭಟಕ್ಕೆ ಸೋತು ಹೋಗಿವೆ. ಇದರ ನಡುವೆಯೂ ಗದಗ ಜಿಲ್ಲೆಯ ಖಾಕಿ ಪಡೆ ನೊಂದವರಿಗೆ ತನ್ನ ಕೈಲಾದಷ್ಟು ಕರುಣೆಯ ಕೈ ತುತ್ತು ನೀಡ್ತಿದೆ. ಕಠೋರ ಅನಿಸೋ ಖಾಕಿಗೂ ಕಾರುಣ್ಯದ ಮನಸ್ಸು ಇರುತ್ತೆ ಅನ್ನೋದನ್ನ ಜನ ಅರ್ಥ ಮಾಡಿಕೊಳ್ಳಬೇಕಷ್ಟೆ.ಅದೇನೆ ಇರಲಿ…ಲಾಠಿ ರುಚಿ ತೋರಿಸೋ ಪೊಲಿಸಪ್ಪನ ಕೈ ತುತ್ತಿಗೆ ನಮ್ಮದೊಂದು ಹ್ಯಾಟ್ಸಾಫ್.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ