ನವದೆಹಲಿ, ಮೇ 14; ಭಾರತದಲ್ಲಿ ಕೋವಿಡ್ 2ನೇ ಅಲೆ ಆತಂಕ ಮೂಡಿಸಿದೆ. ಸೋಂಕಿನ ವಿರುದ್ಧದ ಲಸಿಕೆ ಪಡೆಯಲು ಜನರು ತಯಾರಾಗಿದ್ದಾರೆ. ಆದರೆ ವಿವಿಧ ರಾಜ್ಯಗಳಲ್ಲಿ ಲಸಿಕೆಯ ಲಭ್ಯತೆಯೇ ಇಲ್ಲ.
ಮೇ ತಿಂಗಳಿನಲ್ಲಿ 8.8 ಕೋಟಿ ಡೋಸ್ ಲಸಿಕೆ ದೇಶದಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಜೂನ್ ತಿಂಗಳ ಬಳಿಕ ಲಸಿಕೆ ಉತ್ಪಾದನೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಂಕಿ ಅಂಶಗಳ ಪ್ರಕಾರ ಜೂನ್‌ನಲ್ಲಿ 15.81 ಕೋಟಿ ಡೋಸ್, ಆಗಸ್ಟ್‌ನಲ್ಲಿ 36.6 ಕೋಟಿ ಡೋಸ್, ಡಿಸೆಂಬರ್ ವೇಳೆಗೆ 65 ಕೋಟಿ ಡೋಸ್ ಲಸಿಕೆ ಲಭ್ಯವಾಗಲಿದೆ.
ಆಗಸ್ಟ್‌ನಿಂದ ಡಿಸೆಂಬರ್ ತನಕ 268 ಕೋಟಿ ಡೋಸ್ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಜೂನ್‌ನಿಂದಲೇ ದೇಶದಲ್ಲಿ ಲಸಿಕೆ ಕೊರತೆಯ ಸಮಸ್ಯೆ ಕಡಿಮೆಯಾಗುವ ಭರವಸೆ ಇದೆ. ಕೊವ್ಯಾಕ್ಸಿನ್, ಕೋವಿಶೀಲ್ಡ್ ಹೊರತುಪಡಿಸಿ ಬೇರೆ ಕಂಪನಿಗಳ ಲಸಿಕೆ ಸಹ ದೇಶಕ್ಕೆ ಆಗಮಿಸಲಿದೆ.
ಕೋವಿಡ್ ಲಸಿಕೆ ವಿಚಾರದಲ್ಲಿ ಕೆಲಸ ಮಾಡುತ್ತಿರುವ ಡಾ. ಎನ್. ಕೆ. ಆರೋರಾ ಈ ಕುರಿತು ಮಾತನಾಡಿದ್ದಾರೆ. “ಮುಂದಿನ 2 ಅಥವ ಎರಡೂವರೆ ತಿಂಗಳು ಲಸಿಕೆ ಕೊರತೆ ಕಾಡಬಹುದು. ನಂತರ ನಾವು 18-44 ವಯೋಮಿತಿಯವರಿಗೆ ಲಸಿಕೆ ನೀಡುವ ಕಾರ್ಯ ಚುರುಕುಗೊಳಿಸಬಹುದು” ಎಂದು ಹೇಳಿದ್ದಾರೆ.
ಕೋವಿಡ್ ಲಸಿಕೆ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ. ವಿನೋದ್ ಕುಮಾರ್ ಪೌಲ್ ಮಾತನಾಡಿದ್ದು, “ಆಗಸ್ಟ್‌ನಿಂದ ಡಿಸೆಂಬರ್ ಅಂತ್ಯದ ತನಕ 216 ಕೋಟಿ ಡೋಸ್ ಲಭ್ಯವಾಗುವ ನಿರೀಕ್ಷೆ ಇದೆ. ಇನ್ನೂ 8 ಹೊಸ ಲಸಿಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಸಿಕೆ ಹಂಚಿಕೆ ಬಗ್ಗೆ ಸರಿಯಾದ ಕ್ರಮದಲ್ಲಿ ಯೋಜನೆ ರೂಪಿಸಿದರೆ ಹೊಸ ವರ್ಷದಲ್ಲಿ ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ತಗ್ಗುವ ನಿರೀಕ್ಷೆ ಇದೆ. ಬೇರೆ ಲಸಿಕೆಗಳ ಕ್ಲಿನಿಕಲ್ ಪ್ರಯೋಗಳು ಈಗಾಗಲೇ ಅಂತಿಮ ಹಂತಕ್ಕೆ ಬಂದಿದ್ದು, ಅವುಗಳು ಮಾರುಕಟ್ಟೆಗೆ ಬಂದರೆ ಸಹಾಯಕವಾಗಲಿದೆ.
Laxmi News 24×7