ಹೈದರಾಬಾದ್, ಮೇ 14; ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷದೊಳಗಿನವರ ಮೇಲೆ ಎರಡು ಮತ್ತು 3ನೇ ಹಂತದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ದೇಶದಲ್ಲಿ ಈ ಲಸಿಕೆ ನೀಡಲಾಗುತ್ತಿದೆ.
ಕೋವಿಡ್ ಸೋಂಕಿನ ವಿರುದ್ಧ ಭಾರತದಲ್ಲಿ ಲಭ್ಯವಿರುವ ಲಸಿಕೆಯಲ್ಲಿ ಕೊವ್ಯಾಕ್ಸಿನ್ ಸಹ ಒಂದು. ಈ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಭಾರತದ ಪ್ರಧಾನ ಔಷಧ ನಿಯಂತ್ರಕರು ಅನುಮತಿ ನೀಡಿದ್ದಾರೆ.
ಹೈದರಾಬಾದ್‌ನಲ್ಲಿ ಭಾರತ್ ಬಯೋಟೆಕ್ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ಸ್ಥಳೀಯವಾಗಿ ಕೊವ್ಯಾಕ್ಸಿನ್ ಅಭಿವೃದ್ಧಿಗೊಳಿಸಿದೆ.
ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಲಸಿಕಾ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆ ನೀಡಲಾಗುತ್ತಿದೆ. 2 ಮತ್ತು 3ನೇ ಹಂತದಲ್ಲಿ 2 ರಿಂದ 18 ವರ್ಷದ ವಯೋಮಿತಿ ಜನರ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲು ಈಗ ಅನುಮತಿ ಸಿಕ್ಕಿದೆ.
ಮೇ 12ರಂದು ಸಭೆ ಸೇರಿದ್ದ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ನೀಡಿದ್ದ ಶಿಫಾರಸನ್ನು ಡಿಜಿಸಿಐ ಎಚ್ಚರಿಕೆಯಿಂದ ಪರೀಕ್ಷಿಸಿದ ಬಳಿಕ ಕೊವ್ಯಾಕ್ಸಿನ್ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೊಟ್ಟಿದೆ. 525 ಆರೋಗ್ಯವಂತ ಸ್ವಯಂ ಸೇವಕರ ಮೇಲೆ ಈ ಪ್ರಯೋಗ ನಡೆಯಲಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಈ ಪ್ರಯೋಗ ನಡೆಯಲಿದೆ. ಏಮ್ಸ್‌ನ ದೆಹಲಿ, ಪಾಟ್ನಾ ಹಾಗೂ ನಾಗ್ಪುರದದ ಆಸ್ಪತ್ರೆಯಲ್ಲಿಯೂ ಕ್ಲಿನಿಕಲ್ ಟ್ರಯಲ್ ನಡೆಯಲಿದೆ. ವಿವಿಧ ವಯೋಮಾನದವರಲ್ಲಿ ಲಸಿಕೆ ಬೀರುವ ಪರಿಣಾಮದ ಕುರಿತು ಅಧ್ಯಯನ ನಡೆಯಲಿದೆ.
ಒಟ್ಟು 2 ಹಂತದಲ್ಲಿ 28 ದಿನಗಳ ಅಂತದಲ್ಲಿ ಲಸಿಕೆಯನ್ನು ನೀಡಿ ಅದು ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ನಡೆಸಲಾಗುತ್ತದೆ.
Laxmi News 24×7