ಲಕ್ನೊ: ಚುನಾವಣೆ ಡ್ಯೂಟಿಗೆ ಹಾಜರಾಗಿದ್ದ ಸುಮಾರು ಎರಡು ಸಾವಿರ ಉದ್ಯೋಗಿಗಳು ಕೊರೊನಾಗೆ ಬಲಿಯಾಗಿದ್ದಾರೆ. ಇದರಲ್ಲಿ 700ಕ್ಕೂ ಹೆಚ್ಚು ಜನರು ಶಿಕ್ಷಕರಿದ್ದಾರೆ ಎಂದು ಪತ್ರಿಕೆಯೊಂದು ವರದಿಯಾಗಿದೆ.
ಕೊರೊನಾ ಎರಡನೇ ಅಲೆಯ ನಡುವೆಯೂ ಉತ್ತರ ಪ್ರದೇಶದಲ್ಲಿ ಪಂಚಾಯ್ತಿ ಚುನಾವಣೆ ನಡೆದಿದೆ. ಆದ್ರೆ ಡ್ಯೂಟಿಗೆ ಹಾಜರಾಗಿದ್ದ ಬಹುತೇಕ ನೌಕರರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ 706 ಶಿಕ್ಷಕರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಈ ಸಂಖ್ಯೆ ಸಾವಿರದ ಗಡಿ ದಾಟುವ ಆತಂಕವನ್ನ ಶಿಕ್ಷಣ ಇಲಾಖೆ ಹೊರ ಹಾಕಿದೆ.

ಉತ್ತರ ಪ್ರದೇಶದ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ದಿನೇಶ್ ಚಂದ್ರ ಶರ್ಮಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ 10 ಪುಟಗಳ ದೀರ್ಘವಾದ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಚುನಾವಣೆ ಡ್ಯೂಟಿಗೆ ಹಾಜರಾಗಿ ಕೊರೊನಾದಿಂದ ಸಾವನ್ನಪ್ಪಿರುವ ಜಿಲ್ಲಾವಾರು ಶಿಕ್ಷಕರ ಮಾಹಿತಿಯನ್ನ ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ಕಳೆದ ಒಂದು ವಾರದಿಂದ ಶಿಕ್ಷಕರು ಮರಣ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾರಣ ಚುನಾವಣೆ ಡ್ಯೂಟಿ. ಮೃತ ಕುಟುಂಬಗಳಿಗೆ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ದಿನೇಶ್ ಚಂದ್ರ ಶರ್ಮಾ ಒತ್ತಾಯಿಸಿದ್ದಾರೆ.

ಕೊರೊನಾ ಹಿನ್ನೆಲೆ ಬಹುತೇಕ ಸರ್ಕಾರ ಕಚೇರಿಗಳಿಗೆ ಸಿಬ್ಬಂದಿ ಆಗಮಿಸುತ್ತಿಲ್ಲ. ಚುನಾವಣೆ ಡ್ಯೂಟಿ ಮಾಡಿ ಬಂದ ನೌಕರರು ಸ್ವಯಂ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನು ನಗರಸಭೆಗಳು ಸಿಬ್ಬಂದಿ ಇಲ್ಲದೇ ಖಾಲಿ ಹೊಡೆಯುತ್ತಿವೆ.
Laxmi News 24×7