ನವದೆಹಲಿ: ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾಗರಿಕರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವುದನ್ನು ಯಾವುದೇ ಸರ್ಕಾರ ಹತ್ತಿಕ್ಕುವಂತಿಲ್ಲ. ಈ ವಿಷಯದಲ್ಲಿ ನಾಗರಿಕರಿಗೆ ಕಿರುಕುಳ ನೀಡಿದರೆ ಅದನ್ನು ನ್ಯಾಯಾಂಗ ನಿಂದನೆ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಸರ್ಕಾರಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಕರೊನಾ ಸಾಂಕ್ರಾಮಿಕ ಕುರಿತಂತೆ ಜನರು ತಮ್ಮ ಕುಂದು-ಕೊರತೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಅದು ತಪುಪ ಮಾಹಿತಿ ಆಗುವುದಿಲ್ಲ. ಆಕ್ಸಿಜನ್ ಅಥವಾ ಬೆಡ್ ದೊರಕಿಲ್ಲ ಎಂದು ಹೇಳುವುದು ಸುಳ್ಳು ಸಂಗತಿಯಲ್ಲ. ಜನರು ಈಗ ಕಷ್ಟ ಎದುರಿಸುತ್ತಿದ್ದಾರೆ. ಅವರ ದನಿಯನ್ನು ದಮನಿಸಲು ಸರ್ಕಾರ ಮುಂದಾದರೆ ನಾವು ಸುಮ್ಮನಿರುವುದಿಲ್ಲ. ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.
ವಿಭಿನ್ನ ಲಸಿಕೆ ಬೆಲೆಗೆ ಅಸಮಾಧಾನ: ಕೋವಿಡ್ ಲಸಿಕೆಗಳಿಗೆ ವಿಭಿನ್ನ ದರ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಇದು ಅತ್ಯಂತ ಗಂಭೀರ ವಿಷಯ. ಬಡವರು, ಶೋಷಿತ ವರ್ಗದವರು ಔಷಧವನ್ನು ಹೇಗೆ ಖರೀದಿಸಲು ಸಾಧ್ಯ? ಎಂದು ಪ್ರಶ್ನಿಸಿತು. ಎಲ್ಲ ಡೋಸೇಜ್ಗಳನ್ನೇಕೆ ಸರ್ಕಾರ ಖರೀದಿಸುತ್ತಿಲ್ಲ? ಲಸಿಕೆಗಾಗಿ ಬಡವರು ಖಾಸಗಿ ಆಸ್ಪತ್ರೆಗಳ ಮರ್ಜಿಗೆ ಬೀಳಬೇಕೆ ಎಂದು ತಪರಾಕಿ ಹಾಕಿತು. ಲಸಿಕೆಯ ಉತ್ಪಾದನೆ ಹೆಚ್ಚಿಸಲು ಸರ್ಕಾರ ಹೂಡಿಕೆಯನ್ನು ಅಧಿಕಗೊಳಿಸಬೇಕು ಎಂದು ಸೂಚಿಸಿತು. ಕೋವಿಡ್ ಕುರಿತಂತೆ
ಸಾಮಾಜಿಕ ಜಾಲತಾಣದಲ್ಲಿ ತಪುಪ ಸಂದೇಶಗಳು ರವಾನೆ ಆಗುತ್ತಿರುವುದಿಂದ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ತಡೆಯುಂಟು ಮಾಡುತ್ತದೆ ಎಂದು ಸರ್ಕಾರ ಕಳೆದ ವಾರ ಸೂಚಿಸಿದ್ದ ಹಿನ್ನೆಲೆಯಲ್ಲಿ ಟ್ವಿಟರ್ 50 ಪೋಸ್ಟ್ಗಳನ್ನು ಡಿಲೀಟ್ ಮಾಡಿತ್ತು.
Laxmi News 24×7