Breaking News

ಸಂಕಷ್ಟಕ್ಕೆ ಮಿಡಿದ ಎಂ.ಬಿ.ಪಾಟೀಲ್‌ಗೆ ಧನ್ಯವಾದ: ಸುಧಾಕರ್

Spread the love

ವಿಜಯಪುರ/ಬೆಂಗಳೂರು, ಏಪ್ರಿಲ್ 23: ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ತಮ್ಮ ಆಸ್ಪತ್ರೆಯಲ್ಲಿ ಕಡಿಮೆ ದರಕ್ಕೆ ಸೇವೆ ನೀಡಿ ಕೊರೊನಾ ಸಂಕಷ್ಟದ ಪರಿಸ್ಥಿತಿ ನಿಭಾಯಿಸಲು ಸಹಕಾರ ನೀಡಿದ್ದಾರೆ. ಇದೇ ರೀತಿ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳು ಜನರ ಸಂಕಷ್ಟಕ್ಕೆ ಮಿಡಿಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ವಿಜಯಪುರದ ಬಿಎಲ್‌ಡಿಇ ಮೆಡಿಕಲ್ ಕಾಲೇಜಿನ ಮುಖ್ಯಸ್ಥರಾದ ಮಾಜಿ ಸಚಿವ ಎಂ.ಬಿ.ಪಾಟೀಲ್ ಕೊರೊನಾದಿಂದಾಗಿ ಬಾಧಿತರಾಗಿರುವ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳ ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್ ಗೆ ಮೀಸಲಿಡುವ ಕ್ರಮ ಜಾರಿಯಲ್ಲಿದೆ.

ಆದರೆ ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳನ್ನು ಅರಿತಿರುವ ಹಿರಿಯ ರಾಜಕಾರಣಿ ಎಂ.ಬಿ.ಪಾಟೀಲ್, ತಮ್ಮ ಆಸ್ಪತ್ರೆಯಲ್ಲಿ ಹಾಸಿಗೆಗಳ ದರವನ್ನು ಶೇ.70 ರಷ್ಟು ಕಡಿತಗೊಳಿಸಿದ್ದಾರೆ. ಜೊತೆಗೆ 500 ಹಾಸಿಗೆಗಳನ್ನು ಆರ್ಥಿಕವಾಗಿ ದುರ್ಬಲರಾದ ವರ್ಗಕ್ಕೆ ಮೀಸಲಿಟ್ಟಿದ್ದಾರೆ. ಈ ಜನಸ್ನೇಹಿ ಕ್ರಮ ಇಂತಹ ಕೋವಿಡ್ ಪರಿಸ್ಥಿತಿಗೆ ಬಹಳಷ್ಟು ನೆರವಾಗಿದೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ:

ಇನ್ನೂ ಅನೇಕರು ಈ ರೀತಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ. ಡಾ.ಸಿ.ವಿ.ಮೋಹನ್ ಅವರು ಬೊಮ್ಮಸಂದ್ರದ ಚೇತನ ವಿಹಾರ ಎಲ್ಡರ್ ಕೇರ್ ಸೆಂಟರ್ ನ 200 ಹಾಸಿಗೆಗಳನ್ನು ಸ್ವಯಂಪ್ರೇರಿತರಾಗಿ ಕೋವಿಡ್ ಗೆ ಮೀಸಲಿಟ್ಟಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಕರೆಗೆ ಈ ರೀತಿ ತ್ವರಿತವಾಗಿ ಸ್ಪಂದಿಸಿರುವುದು ಶ್ಲಾಘನೀಯವಾಗಿದ್ದು, ಇವರಿಗೂ ಧನ್ಯವಾದಗಳು ಎಂದು ಸಚಿವರು ತಿಳಿಸಿದ್ದಾರೆ.

ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದಲ್ಲಿ ಕೋವಿಡ್ ನಿಂದ ಚೇತರಿಸಿಕೊಂಡವರ ರಕ್ತದಿಂದ ಪ್ಲಾಸ್ಮ ತೆಗೆದು ಚಿಕಿತ್ಸೆಗೆ ಒದಗಿಸಿಕೊಡುವ ಅಭಿಯಾನ ಆರಂಭವಾಗಿದೆ. ಇದು ಕೋವಿಡ್ ನಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳಿಗೆ ಸಂಜೀವಿನಿ ನೀಡುವ ಉತ್ತಮ ಕ್ರಮವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಒಗ್ಗಟ್ಟಿನ ಹೋರಾಟ ಬೇಕು:

ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗ ಅವಿರತವಾಗಿ ಶ್ರಮಿಸುತ್ತಿದೆ. ಯಾವುದೇ ಪಕ್ಷ, ಸಿದ್ಧಾಂತಗಳ ಭೇದವಿಲ್ಲದೆ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳು ಕೋವಿಡ್ ಹೋರಾಟದಲ್ಲಿ ಭಾಗಿಯಾಗಿರುವುದು ಒಗ್ಗಟ್ಟಿನ ಸಂಕೇತವಾಗಿದೆ. ಇಂತಹ ಒಗ್ಗಟ್ಟಿನ ಹೋರಾಟದಿಂದ ನಾವು ಕೊರೊನಾವನ್ನು ಮಣಿಸಬೇಕಿದೆ. ಇನ್ನೂ ಹೆಚ್ಚು ಸಂಘ, ಸಂಸ್ಥೆಗಳು ಮುಂದೆ ಬಂದು ತಮ್ಮ ವ್ಯಾಪ್ತಿಯಲ್ಲಿ ಕೊರೊನಾ ಸಾಂಕ್ರಾಮಿಕವನ್ನು ಹೊಡೆದೋಡಿಸಲು ನೆರವಾಗಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ

Spread the love ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರನ್ನು ರಾಜ್ಯ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ