Breaking News

ಲಾಕ್ ಡೌನ್ ಮಾದರಿಯಲ್ಲಿ ಬಿಗಿ ಕ್ರಮ ಕೈಗೊಳ್ಳಿ- ಬಸವರಾಜ ಬೊಮ್ಮಾಯಿ

Spread the love

ಬೆಂಗಳೂರು: ದಿನೇದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಹಾಸಿಗೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಂಟಿ ಕಾರ್ಯಾಚರಣೆ ಮಾಡುವಂತೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಬೆಂಗಳೂರಿನ ಉಪ ಪೊಲೀಸ್ ಆಯುಕ್ತರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಈ ಕಟ್ಟುನಿಟ್ಟಿನ ಆದೇಶ ಮಾಡಿದರು.

ಬೆಂಗಳೂರು ನಗರವನ್ನು 8 ವಲಯಗಳನ್ನಾಗಿ ವಿಂಗಡನೆ ಮಾಡಲಾಗಿದೆ. ಒಂದೊಂದು ವಲಯಕ್ಕೆ ಒಬ್ಬ ಉಪ ಪೊಲೀಸ್ ಆಯುಕ್ತ ಹಾಗೂ ಬಿಬಿಎಂಪಿ ಜಂಟಿ ಆಯುಕ್ತರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮುಂದಿನ ಮೂರು ನಾಲ್ಕು ದಿನಗಳಲ್ಲಿ ತಮ್ಮ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಿಗೆ ದಿಡೀರ್ ಭೇಟಿ ನೀಡಬೇಕು. ಆಸ್ಪತ್ರೆಯಲ್ಲಿರುವ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಲು ತಪಾಸಣೆ ಮಾಡಬೇಕು. ಅಲ್ಲಿ ಖಾಲಿ ಇರುವ ಬೆಡ್ ಗಳ ಬಗ್ಗೆ ಮಾಹಿತಿ ಪಡೆಯಬೇಕು. ಪ್ರತಿಯೊಂದು ಆಸ್ಪತ್ರೆ ಸರ್ಕಾರಕ್ಕೆ ಶೇಕಡ 50ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡುವಂತೆ ನೋಡಿಕೊಳ್ಳಬೇಕು. ಇದುವರೆಗೆ ಖಾಸಗಿ ಆಸ್ಪತ್ರೆಗಳು 7000 ಬೆಡ್ ಗಳನ್ನು ಸರ್ಕಾರಕ್ಕೆ ನೀಡಿವೆ. ಆದರೆ ಇನ್ನೂ 4000 ಹಾಸಿಗೆ ಗಳನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಬೇಕಾಗಿದೆ. ಅದರಲ್ಲಿಯೂ ಆಕ್ಸಿಜನ್ ಇರುವ ಹಾಸಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಜಂಟಿ ಕಾರ್ಯಾಚರಣೆ ಮೂಲಕ ಆಕ್ಸಿಜನ್ ಇರುವ ಬೇಡಗಳನ್ನು ಪಡೆದುಕೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಬೊಮ್ಮಾಯಿ ತಾಕೀತು ಮಾಡಿದರು.

ಲಾಕ್ ಡೌನ್ ಮಾದರಿಯಲ್ಲಿ ಬಿಗಿ ಕ್ರಮ ಕೈಗೊಳ್ಳಿ- ಪೊಲೀಸ್ ಆಯುಕ್ತರಿಗೆ ಸೂಚನೆ:
ಕಳೆದ ಬಾರಿಯ ಲಾಕ್ಡೌನ್ ಸಂದರ್ಭದಲ್ಲಿ ಕೈಗೊಳ್ಳಲಾಗಿದ್ದ ಬಿಗಿ ಕ್ರಮಗಳನ್ನು ನಾಳೆ ರಾತ್ರಿಯಿಂದ ಆರಂಭವಾಗಲಿರುವ ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿಯೂ ಜಾರಿಗೊಳಿಸಿ. ಮುಖ್ಯ ಮತ್ತು ಸಣ್ಣ ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನು ಅಳವಡಿಸಿ. ವಾಹನ ಸಂಚಾರ ನಿರ್ಬಂಧಿಸಿ. ಅನವಶ್ಯಕವಾಗಿ ಬೆಂಗಳೂರಿಗೆ ಬರುವವರನ್ನು ನಿರ್ಬಂಧಿಸಿ. ವಿನಾಕಾರಣ ತಿರುಗಾಡಲು ಜನರಿಗೆ ಅವಕಾಶ ನೀಡಬೇಡಿ. ಕಾನೂನು ಉಲ್ಲಂಘನೆ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ವಿನಾಕಾರಣ ಓಡಾಡುವ ಜನ ಬಳಸುವ ವಾಹನಗಳನ್ನು ಸೀಜ್ ಮಾಡಿ. ಒಳ್ಳೆ ಮಾತಿನಲ್ಲಿ ಕೇಳದಿದ್ದರೆ ಕಠಿಣ ಕ್ರಮ ಜರುಗಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಾರಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಮದುವೆ ಸಮಾರಂಭ ನಡೆಯುತ್ತಿವೆ. ಕಲ್ಯಾಣ ಮಂಟಪ ಹಾಗೂ ಸಭಾ ಮಂದಿರಗಳ ಮಾಲೀಕರ ಜೊತೆಗೆ ಮಾತನಾಡಿ. ಅವರಿಂದ ಕಾನೂನು ಉಲ್ಲಂಘನೆ ಆಗದಿರುವ ಕುರಿತು ಮುಚ್ಚಳಿಕೆಯನ್ನು ಪಡೆಯಿರಿ. ಕಾನೂನು ಉಲ್ಲಂಘನೆ ಮಾಡುವ ಚೌಟ್ರಿ ಹಾಗೂ ಕಲ್ಯಾಣ ಮಂಟಪಗಳನ್ನು ಮುಲಾಜಿಲ್ಲದೆ ಬಂದ್ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಚಿವ ಬೊಮ್ಮಾಯಿ ಕಟ್ಟುನಿಟ್ಟಿನ ಅಪ್ಪಣೆ ಮಾಡಿದರು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರ ಜವಾಬ್ದಾರಿ. ಹೀಗಾಗಿ ಪೊಲೀಸ್ ಸಿಬ್ಬಂದಿಯ ಸುರಕ್ಷತೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸುವ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಪೊಲೀಸ್ ಸಿಬ್ಬಂದಿಗೆ ಒದಗಿಸಲಾಗಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ