Breaking News

ಪಿಎಂ ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ಕೊರೋನ ನಿರ್ವಹಣೆಗೆ ನೀಡಿರುವ ದುಡ್ಡು ಎಷ್ಟು?: ಸಿದ್ದರಾಮಯ್ಯ

Spread the love

ಬೆಂಗಳೂರು, ಎ. 22: `ಆಡಳಿತ ನಡೆಸುವವರ ಕೆಲಸ ಪ್ರಶ್ನೆ ಕೇಳುವುದಲ್ಲ, ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು. ತಮ್ಮದು ವಿರೋಧ ಪಕ್ಷ ಅಲ್ಲ, ಆಡಳಿತಾರೂಢ ಪಕ್ಷ ಎನ್ನುವುದನ್ನು ರಾಜ್ಯ ಬಿಜೆಪಿ ಸರಕಾರ ಏನಾದರೂ ಮರೆತುಬಿಟ್ಟಿದೆಯಾ ಹೇಗೆ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, `ಪಂಚ ಪ್ರಶ್ನೆಗೆ ಉತ್ತರಿಸುವ ಧೈರ್ಯ ತೋರುವಿರಾ ಸಿದ್ದರಾಮಯ್ಯ?’ ಎಂಬ ಬಿಜೆಪಿ ಟ್ವೀಟ್‍ಗೆ ತಿರುಗೇಟು ನೀಡಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, `ಪ್ರಶ್ನೆ ಕೇಳುವ ಅಷ್ಟೊಂದು ಹುಚ್ಚಿದ್ದರೆ ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ವಿರೋಧ ಪಕ್ಷದಲ್ಲಿ ಕೂತುಕೊಂಡು ಪ್ರಶ್ನೆ ಕೇಳಿ, ನಾವು ಉತ್ತರಿಸುತ್ತೇವೆ. ರಾಜ್ಯ ಬಿಜೆಪಿ ನಾಯಕರು ಬೆಳಗ್ಗೆ ಎದ್ದು ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡರೆ ಅವರಿಗೂ ಹಿತ, ರಾಜ್ಯಕ್ಕೂ ಹಿತ. ಕೊರೋನ ಎರಡನೆ ಅಲೆಯಿಂದ ತತ್ತರಿಸಿಹೋಗಿರುವ ಜನತೆ ಪ್ರಶ್ನಿಸುತ್ತಿರುವುದು ಆಡಳಿತ ಪಕ್ಷವನ್ನು, ವಿರೋಧ ಪಕ್ಷವನ್ನು ಅಲ್ಲ ಎನ್ನುವುದು ನೆನಪಿರಲಿ’ ಎಂದು ಎಚ್ಚರಿಸಿದ್ದಾರೆ.

ಸೌಜನ್ಯಪೂರ್ವಕವಾಗಿ ನೆರವು ನೀಡಿ ಎಂದು ಪ್ರಧಾನಿಯವರನ್ನು ಕೋರಿದ್ದೆ. ಅಂತಹ ಸೌಜನ್ಯಪೂರಿತ ನಡವಳಿಕೆಗೆ ನೀವು ಯೋಗ್ಯರಲ್ಲ. ನೆರವು ನೀಡಲು ನೀವು ದಾನಿಗಳಲ್ಲ, ಪಡೆಯಲು ನಾವು ನಿಮ್ಮ ಮನೆಮುಂದೆ ನಿಂತ ಭಿಕ್ಷುಕರೂ ಅಲ್ಲ. ಆರೂವರೆ ಕೋಟಿ ಜನ ಬೆವರಗಳಿಕೆಯಲ್ಲಿ ಪಾವತಿಸಿರುವ ತೆರಿಗೆ ಹಣದಲ್ಲಿ ಕರ್ನಾಟಕದ ಪಾಲು ಕೇಳುತ್ತಿದ್ದೇವೆ’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನನ್ನ ದಶ ಪ್ರಶ್ನೆಗಳೇ ಉತ್ತರ: `ನಿಮ್ಮ ಪಂಚ ಪ್ರಶ್ನೆಗೆ ನನ್ನ ಮೊದಲ ಕಂತಿನ ದಶ ಪ್ರಶ್ನೆಗಳೇ ಉತ್ತರ.

ಕರ್ನಾಟಕದಿಂದ ಪಿಎಂ ಕೇರ್ಸ್ ನಿಧಿಗೆ ಸಂಗ್ರಹವಾಗಿರುವ ಹಣ ಎಷ್ಟು? ಪಿಎಂ ಕೇರ್ಸ್ ನಿಧಿಯಿಂದ ಇಲ್ಲಿಯವರೆಗೆ ಕರ್ನಾಟಕಕ್ಕೆ ಕೊರೋನ ನಿರ್ವಹಣೆಗಾಗಿ ನೀಡಿರುವ ದುಡ್ಡು ಎಷ್ಟು? 50 ಸಾವಿರ ವೆಂಟಿಲೇಟರ್ ತಯಾರಿಕೆಗೆ ಪಿಎಂ ಕೇರ್ಸ್ ನಿಧಿಯಿಂದ 2 ಸಾವಿರ ಕೋಟಿ ರೂ.ನೀಡಲಾಗಿದೆ. ಅದರಲ್ಲಿ ಕರ್ನಾಟಕಕ್ಕೆ ನೀಡಿದ್ದು ಕೇವಲ 90 ವೆಂಟಿಲೇಟರ್ ಮಾತ್ರ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ. ನಮ್ಮ ರಾಜ್ಯಕ್ಕೆ ಮಾತ್ರ ಈ ಅನ್ಯಾಯ ಏಕೆ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೊರೋನ ಸೋಂಕಿನ ಪರಿಣಾಮವಾಗಿ ಲಾಕ್‍ಡೌನ್ ಹೇರಿದ ನಂತರ ಬೀದಿಗೆ ಬಿದ್ದ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಪಿಎಂ ಕೇರ್ಸ್ ನಿಧಿಯಿಂದ ಬಿಡುಗಡೆಯಾಗಿದ್ದೇ 1 ಸಾವಿರ ಕೋಟಿ ರೂ. . ಅದರಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ 30 ಕೋಟಿ ರೂ. ಮಾತ್ರ. ಈ ಅನ್ಯಾಯಕ್ಕೆ ಯಾರು ಹೊಣೆ? ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಕೊರೋನ ಸೋಂಕಿತರು ಸಾಯುತ್ತಿರುವುದು ನಿಜವಲ್ಲವೇ ಬಿಜೆಪಿ ನಾಯಕರೇ? ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೇಡಿಕೆ ಎಷ್ಟು? ಪೂರೈಕೆಯಾಗುತ್ತಿರುವುದು ಎಷ್ಟು? ಕೇಂದ್ರ ಸರಕಾರ ನೀಡಿರುವುದು ಎಷ್ಟು?’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ 2019-20ಕ್ಕೆ ಹೋಲಿಸಿದರೆ 2020-21ರಲ್ಲಿ ಆಕ್ಸಿಜನ್ ಉತ್ಪಾದನೆ ದುಪ್ಪಟ್ಟಾಗಿದ್ದರೂ ಈಗಿನ ಆಕ್ಸಿಜನ್ ಕೊರತೆಗೆ ಕಾರಣ ಏನು? ಹೊಣೆ ಯಾರು? ಪ್ರಪಂಚದಲ್ಲಿ ಅತಿಹೆಚ್ಚು ಆಕ್ಸಿಜನ್ ಉತ್ಪಾದಿಸುವ ದೇಶ ಭಾರತವಾಗಿದ್ದರೂ, ದೇಶದಲ್ಲಿ ಕೊರೋನ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದು ಏಕೆ?’ ಎಂದು ಸಿದ್ದರಾಮಯ್ಯ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಕಿಡಿಕಾರಿದ್ದಾರೆ.

ಒಂದು ವರ್ಷದ ಹಿಂದೆಯೇ ಕೊರೋನ ಸೋಂಕು ಕಾಣಿಸಿಕೊಂಡಾಗಲೇ ಆಕ್ಸಿಜನ್ ಅವಶ್ಯಕತೆ ಬಗ್ಗೆ ತಜ್ಞರು ಎಚ್ಚರಿಸಿದ್ದರೂ ಹಿಂದಿನ ವರ್ಷಕ್ಕಿಂತ ಆಕ್ಸಿಜನ್ ರಫ್ತಿನ ಪ್ರಮಾಣ ದುಪ್ಪಟ್ಟುಗೊಳಿಸಿದ್ದು ಯಾಕೆ? ನಮ್ಮ ದೇಶದ ಜನಸಂಖ್ಯಾ ಪ್ರಮಾಣಕ್ಕೆ ಹೋಲಿಸಿದರೆ ಈವರೆಗೆ ಕಡಿಮೆ ಪ್ರಮಾಣದಲ್ಲಿ ಕೊರೋನ ಲಸಿಕೆ ನೀಡಿರುವುದು ಭಾರತದಲ್ಲಿ (ಶೇ.10ಕ್ಕಿಂತ ಕಡಿಮೆ). ಈ ಹಿಂದುಳಿಯುವಿಕೆಗೆ ಯಾರು ಕಾರಣ?’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

`ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ಸುಧಾರಣೆಯಾಗಿದ್ದರೆ ಕೊರೋನ ರೋಗಿಗಳು ಚಿಕಿತ್ಸೆ ಇಲ್ಲದೆ ಸಾಯುತ್ತಿರುವುದು ಯಾಕೆ? ಖಾಸಗಿ ಆಸ್ಪತ್ರೆಗಳ ಮುಂದೆ ಕ್ಯೂ ನಿಂತಿರುವುದು ಏಕೆ? ಎಂದು ಖಾರವಾಗಿ ಪ್ರಶ್ನಿಸಿರುವ ಸಿದ್ದರಾಮಯ್ಯ `ಪ್ರಶ್ನೆಗಳು ಮುಂದುವರಿಯಲಿ’ ಎಂದು ಬಿಜೆಪಿ ಕೇಳಿದ ಪಂಚ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿಯೇ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.


Spread the love

About Laxminews 24x7

Check Also

ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ

Spread the love ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ ಮೈಸೂರು: ಕನ್ನಡಕ್ಕೆ ಮೊದಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ