Breaking News

2ನೇ ಅಲೆಯ ಸೋಂಕಿತರಲ್ಲಿ ಯುವಜನರೇ ಹೆಚ್ಚು! 63 ಯುವಕರು ಸಾವು ; ನಿರ್ಲಕ್ಷ್ಯವೇ ಕಾರಣ

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಸೋಂಕಿತರಲ್ಲಿ ಹೆಚ್ಚು ಕಡಿಮೆ ಅರ್ಧಕ್ಕರ್ಧದಷ್ಟು ಯುವಜನರೇ ಇದ್ದು, ಈ ಪೈಕಿ 63 ಮಂದಿ ಸಾವಿಗೀಡಾಗಿದ್ದಾರೆ.

ಕೊರೊನಾ ವಯಸ್ಸಾದವರಲ್ಲಿ ಹೆಚ್ಚಾಗಿರುತ್ತದೆ ಹಾಗೂ ಬೇರೆ ಕಾಯಿಲೆಗಳು ಇದ್ದವರು ಮತ್ತು ವಯಸ್ಸಾದವರು ಮಾತ್ರ ಸಾವಿಗೀಡಾಗುತ್ತಾರೆ ಎಂಬ ಭಾವನೆ ಜನರಲ್ಲಿದೆ. ಅದಕ್ಕೆ ವಿರುದ್ಧವಾದ ವಿದ್ಯಮಾನ ಈಗ ಕಂಡು ಬರುತ್ತದೆ. ಎರಡನೇ ಅಲೆಗೆ ಹೆಚ್ಚು 20ರಿಂದ 40 ವರ್ಷದ ಯುವಜನರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಅಲ್ಲದೆ, ಯಾವುದೇ ಆನಾರೋಗ್ಯ ಇಲ್ಲದಿದ್ದವರೂ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಸಾವಿಗೀಡಾಗುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.

ಮಾರ್ಚ್‌ನಿಂದ ಇಲ್ಲಿಯವರೆಗೂ 1.95 ಲಕ್ಷ ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 1.1 ಲಕ್ಷ ಮಂದಿ 15ರಿಂದ 40 ವರ್ಷದೊಳಗಿನವರು. ಸಾವಿಗೀಡಾಗಿರುವ 1087 ಸೋಂಕಿತರಲ್ಲಿ 63 ಮಂದಿ ಯುವಜನರು. ಕಳೆದ ಒಂದು ವಾರದಲ್ಲಿ (ಎ.12ರಿಂದ 18) ಯುವಕರಲ್ಲಿ ಸೋಂಕು ಅರ್ಧಕ್ಕಿಂತಲೂ ಹೆಚ್ಚಾಗಿದ್ದು, ನಿತ್ಯ ಐದಾರು ಮಂದಿ ಸಾವಿಗೀಡಾಗುತ್ತಿದ್ದಾರೆ.

ಮೊದಲ ಅಲೆಗಿಂತಲೂ ಹೆಚ್ಚು
ಕೊರೊನಾ ವಾರ್‌ ರೂಂ ಅಂಕಿಅಂಶ ಪ್ರಕಾರ, ಮೊದಲ ಅಲೆಗೆ ಹೋಲಿಸದರೆ ಎರಡನೇ ಅಲೆಯು ಯುವಜನತೆಯನ್ನೇ ಹೆಚ್ಚು ಕಾಡುತ್ತಿದೆ. ಮೊದಲ ಅಲೆಯಲ್ಲಿ 20ರಿಂದ 40 ವರ್ಷದ ಯುವಜನತೆ ಶೇ. 40ಕ್ಕಿಂತ ಕಡಿಮೆ ಇದ್ದರು. ಈಗ ಅದು ಶೇ. 50ಕ್ಕೆ ಹೆಚ್ಚಳವಾಗಿದೆ. ಮೊದಲ ಅಲೆಯ ಸಾವಿನಲ್ಲಿ ಯುವಜನತೆ ಪಾಲು ಶೇ. 5ರಷ್ಟಿತ್ತು. ಈ ಬಾರಿ ಶೇ.6ಕ್ಕೆ ಹೆಚ್ಚಳವಾಗಿದೆ. ಕಳೆದ ಒಂದು ವಾರದಲ್ಲಿ ಶೇ. 8ರಷ್ಟು ವರದಿಯಾಗುತ್ತಿದೆ.

ಕಾರಣವೇನು?
ಯುವ ಜನತೆ ಮನೆಯಿಂದ ಹೊರಗಿದ್ದು ಹೆಚ್ಚು ಚಟುವಟಿಕೆ ಗಳಲ್ಲಿರುತ್ತಾರೆ. ಹೀಗಾಗಿ ಬೇಗ ಸೋಂಕು ತಗಲುತ್ತದೆ. ಮೊದಲ ಅಲೆಯಲ್ಲಿ 3 ತಿಂಗಳು ಲಾಕ್‌ಡೌನ್‌ ಇತ್ತು. ಅಲ್ಲದೆ, ಸೋಂಕಿನ ಭಯವೂ ಹೆಚ್ಚಿತ್ತು. ಈಗಲೂ ವರ್ಕ್‌ ಫ್ರಂ ಹೋಂ ಮಾಡುವುದರಿಂದ ಸೋಂಕನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಮಣಿಪಾಲ್‌ ಆಸ್ಪತ್ರೆಗಳ ಅಧ್ಯಕ್ಷ ಡಾ| ಸುದರ್ಶನ್‌ ಬಲ್ಲಾಳ್‌.

ನಿರ್ಲಕ್ಷ್ಯವೇ ಕಾರಣ
ಸಾವಿಗೀಡಾದ 63 ಯುವಜನತೆಯಲ್ಲಿ 50 ಮಂದಿಗೆ ಯಾವುದೇ ಅನಾರೋಗ್ಯದ ಹಿನ್ನೆಲೆ ಇಲ್ಲ. ಅವರು ತಡವಾಗಿ ಆಸ್ಪತ್ರೆಗೆ ಆಗಮಿಸುತ್ತಿರುವುದೇ ಕಾರಣ ಎಂದು ವೈದ್ಯರು ಹೇಳುತ್ತಿದ್ದಾರೆ. ಸೋಂಕಿನ ಲಕ್ಷಣ ಕಾಣಿಸಿಕೊಂಡಾಗ ಪರೀಕ್ಷೆ ಮಾಡಿಸಿಕೊಳ್ಳದೆ ಮನೆ ಮದ್ದು ಸೇವಿಸುತ್ತಾರೆ. ಕಡಿಮೆಯಾಗದಿದ್ದರೆ ಔಷಧಾಲಯಲಗಳ (ಮೆಡಿಕಲ್‌ ಶಾಪ್‌) ಮೊರೆ ಹೋಗುತ್ತಾರೆ. ಆಗಲೂ ಕಡಿಮೆಯಾಗದಿದ್ದರೆ ಮಾತ್ರ ಆಸ್ಪತ್ರೆಗಳಿಗೆ ಬರುತ್ತಾರೆ. ಅಷ್ಟರಲ್ಲಿ ಕೆಮ್ಮು, ಜ್ವರ ತೀವ್ರಗೊಂಡಿರುತ್ತದೆ. ಅದರಲ್ಲೂ ಕೆಮ್ಮಿನಿಂದ ಶ್ವಾಸಕೋಶ ಸಾಕಷ್ಟು ಹಾನಿಯಾಗಿರುತ್ತದೆ. ಹೀಗಾಗಿ, ಉಸಿರಾಟ ಸಮಸ್ಯೆಯಿಂದ ಸಾವಿಗೀಡಾಗುತ್ತಾರೆ ಎನ್ನುತ್ತಾರೆ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ| ಸಿ. ನಾಗರಾಜ್‌.

ಯುವಕರಿಗೆ ತಜ್ಞರ ಸಲಹೆಗಳು
– ವರ್ಕ್‌ಫ್ರಂ ಹೋಂಗೆ ಆದ್ಯತೆ ಇರಲಿ. ಸೋಂಕನ್ನು ಇನ್ನೊಬ್ಬರಿಂದ ಮುಚ್ಚಿಡಬೇಡಿ. ಜನರಿಂದ ದೂರವಿರಿ.
– ಹೆಚ್ಚು ಓಡಾಡುವ ನಿಮ್ಮಿಂದ ನಿಮ್ಮ ಕುಟುಂಬಸ್ಥರು/ ಸ್ನೇಹಿತರಿಗೆ ಹರಡುತ್ತದೆ. ಆದ್ದರಿಂದ ನಿಮ್ಮೊಂದಿಗೆ ನಿಮ್ಮವರನ್ನೂ ಕಾಪಾಡಿಕೊಳ್ಳಿ.
– ಕೊರೊನಾ ಸೋಂಕು ಎಂದಾದರೆ ಆಸ್ಪತ್ರೆ, ಹೋಂ ಐಸೊಲೇಷನ್‌ ಆಗಬೇಕು ಎಂದು ಭಾವಿಸಿ ನಿರ್ಲಕ್ಷ್ಯ ಮಾಡಬೇಡಿ.
– ಸೋಂಕಿನ ಲಕ್ಷಣ ನಿರ್ಲಕ್ಷ್ಯ ಬೇಡ, ಕೆಮ್ಮು ಹೆಚ್ಚಿದ್ದರೆ ಹಾಗೂ ಸ್ಯಾಚುರೇಷನ್‌ ಪ್ರಮಾಣ ಶೇ. 90ಕ್ಕೂ ಕಡಿಮೆ ಇದ್ದರೆ ಆಸ್ಪತ್ರೆಗೆ ದಾಖಲಾಗಬೇಕು.
– ವ್ಯಾಯಾಮ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಕ್ರಮ ಪಾಲಿಸಿ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ