ಶಿವಮೊಗ್ಗ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಸಚಿವ ಕೆ.ಎಸ್.ಈಶ್ವರಪ್ಪ ನಿರಾಕರಿಸಿದ್ದಾರೆ. ಜೊತೆಗೆ, ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಗರಂ ಸಹ ಆದರು. ಒಂದು ದೇಶ ಒಂದು ಚುನಾವಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಒಳ್ಳೇ ವಿಚಾರ ಕೇಳಿದ್ದೇನೆ. ಆ ದರಿದ್ರ ಸಿಡಿ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಈಶ್ವರಪ್ಪ ಹೇಳಿ ಹೊರಟು ಹೋದರು.
ಇದಕ್ಕೂ ಮುಂಚೆ, ನಗರದಲ್ಲಿ ನಡೆದ ಒಂದು ದೇಶ ಒಂದು ಚುನಾವಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಈ ದೇಶದಲ್ಲಿ ಇದರ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವುದೇ ನಾಚಿಕೆಗೇಡು. ಒಂದು ದೇಶ ಎಂದರೆ ಗುಲಾಮಗಿರಿಯಲ್ಲಿದ್ದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ನೆನಪು ಮಾಡಿಕೊಳ್ಳೋದು. ಆದರೂ ಈಗಲೂ ಕೆಲವೆಡೆ ನಾವು ಗುಲಾಮರು ಎಂಬ ಭಾವನೆ ಇದೆ. ಚಂದ್ರಶೇಖರ ಆಜಾದ್ ಯಾಕೆ ಹೋರಾಟ ಮಾಡಿದರು? ಅವರು ದುಡ್ಡು ಮಾಡೋಕೆ ಹೋರಾಟ ಮಾಡಲಿಲ್ಲ. ಈ ಹಿಂದೆ, ನಮ್ಮ ದೇಶದ ಪ್ರಧಾನಿ ಬೇರೆ ದೇಶಕ್ಕೆ ಹೋದರೆ ಸಾಲ ಕೇಳೋಕೆ ಬಂದಿದ್ದಾರೆ ಎಂದು ಹೇಳುತ್ತಿದ್ದರು. ಆದರೆ ಈಗಿನ ಪ್ರಧಾನಿ ಆ ಭಾವನೆಯನ್ನು ಬದಲಾಯಿಸಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕೆ.ಎಸ್. ಈಶ್ವರಪ್ಪ
ವರ್ಷವಿಡೀ ಚುನಾವಣೆ ಆದರೆ ಸರ್ಕಾರಿ ಅಧಿಕಾರಿಗಳು ಚುನಾವಣೆಯಲ್ಲೇ ಪೂರ್ಣಕಾಲ ಕಳೆಯುತ್ತಾರೆ. ಅಭಿವೃದ್ಧಿ ಕಾಮಗಾರಿ ನಡೆಯಲ್ಲ. ಹಾಗಾಗಿ, ಈ ಕಲ್ಪನೆ ತಂದಿದ್ದೇವೆ. ಚುನಾವಣೆಗಳಿಗೆ ಖರ್ಚು ಮಾಡ್ತಾ ಹೋದರೆ ಅಭಿವೃದ್ಧಿ ಆಗಲ್ಲ, ಕೇವಲ ಆರ್ಥಿಕ ನಷ್ಟ ಆಗುತ್ತದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಣ್ಯರು
‘ಸ್ಥಿರ ಸರ್ಕಾರಗಳು ಇರದಿದ್ದರೆ ಗೆದ್ದ ಶಾಸಕರಿಗೆ ಯಾವ ನಿಷ್ಠೆಯೂ ಇರುವುದಿಲ್ಲ’
ಸ್ಥಿರ ಸರ್ಕಾರಗಳು ಇರದಿದ್ದರೆ ಗೆದ್ದ ಶಾಸಕರಿಗೆ ಯಾವ ನಿಷ್ಠೆಯೂ ಇರುವುದಿಲ್ಲ. ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟು ಹೋಗ್ತಾರೆ. ಉದಾಹರಣೆಗೆ ರಾಜ್ಯದಲ್ಲೇ 17 ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟರು. ಚುನಾವಣೆಗೆ ನಿಂತರೂ ಈ ರೀತಿ ಆಗುತ್ತೆ. ತಮ್ಮನ್ನು ಗೆಲ್ಲಿಸಿದ ಪಕ್ಷಕ್ಕೆ ದ್ರೋಹ ಬಗೆಯುತ್ತಾರೆ. ಈ ಹಿಂದೆ ನಡೆದ ಉಪಚುನಾವಣೆಗಳನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಸಾರ್ವಜನಿಕರು
ಇಡೀ ದೇಶದಲ್ಲಿ ಒಂದೇ ಚುನಾವಣೆ ಆದರೆ ಇವೆಲ್ಲ ಆಗಲ್ಲ. ಪ್ರಧಾನಿ ಮೋದಿ ದೇಶಕ್ಕೆ ಒಳ್ಳೇದಾಗಲಿ ಎಂದು ಈ ಯೋಚನೆ ಮುಂದಿಟ್ಟಿದ್ದಾರೆ. ಆದರೆ ನಗರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಈ ವಿಚಾರದಲ್ಲಿ ಮಾತಾಡ್ತಾರೆ ಅಂದಾಗ ಕಾಂಗ್ರೆಸ್ನ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್ ಪಕ್ಷ ಎಲ್ಲವನ್ನು ವಿರೋಧ ಮಾಡುವುದೇ ವಿಪಕ್ಷದ ಕೆಲಸ ಅಂದುಕೊಂಡಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಚುನಾವಣೆ ಬಗ್ಗೆ ಚರ್ಚೆ ಮಾಡದೇ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಮಾಡಿದಂತೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಚಿವ ಈಶ್ವರಪ್ಪ ಹರಿಹಾಯ್ದರು.
ಸಾಂಸ್ಕೃತಿಕ ಕಾರ್ಯಕ್ರಮ