ಬೆಂಗಳೂರು : ಜೀವನೋಪಾಯಕ್ಕಾಗಿ ಟ್ಯಾಕ್ಸಿ, ಟ್ರಾಕ್ಟರ್ ಹೊಂದಿರುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಟ್ಯಾಕ್ಸಿ, ಟ್ರಾಕ್ಟರ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ವಿತರಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸುವುದಾಗಿ ತಿಳಿಸಿದೆ.
ವಿಧಾನಪರಿಷತ್ ನಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಶಾಂತರಾಮ ಸಿದ್ದಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವನೋಪಾಯಕ್ಕಾಗಿ ಟ್ಯಾಕ್ಸಿ, ಟ್ರಾಕ್ಟರ್ ಇರುವ ಕುಟುಂಬಸ್ಥರಿಗೆ ಬಿಪಿಎಲ್ ಕಾರ್ಡ್ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಈ ಕುಟುಂಬಗಳು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಕೋಟ ಶೀನಿವಾಸ ಪೂಜಾರಿ, ಸ್ವಂತ ಬಳಕೆಗಾಗಿ ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಸ್ಥರಿಗೆ ಬಿಪಿಎಲ್ ಕಾರ್ಡ್ ನೀಡುವಂತಿಲ್ಲ ಎಂಬ ನಿಯಮವಿದ್ದು, ಆದರೆ, ಕುಟುಂಬ ಪೋಷಣೆಗೆ ವಾಣಿಜ್ಯ ವಾಹನ ಹೊಂದಿರುವವರಿಗೆ ಪಡಿತರ ಚೀಟಿ ನೀಡಬೇಕು ಎಂದು ತಿಳಿಸಲಾಗಿದೆ.