: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಚುನಾವಣಾ ಆಯೋಗ ಇಂದು ಅಧಿಸೂಚನೆ ಪ್ರಕಟಿಸಿದೆ. ಅಭ್ಯರ್ಥಿಗಳು ಇಂದಿನಿಂದ ನಾಮಪತ್ರಗಳನ್ನು ಸಲ್ಲಿಕೆ ಮಾಡಬಹುದು.
ಮಾರ್ಚ್ 23ರ ಮಂಗಳವಾರದಿಂದ ಮಾರ್ಚ್ 30ರ ತನಕ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಮಾ.31ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 3ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಅಂತಿಮ ದಿನ. ಏಪ್ರಿಲ್ 17ರಂದು ಮತದಾನ ನಡೆಯಲಿದ್ದು, ಮೇ 2ರಂದು ಮತಗಳ ಎಣಿಕೆ ನಡೆಯಲಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದರೂ ಯಾವುದೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್‌ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ. ಬಿಜೆಪಿಯಿಂದ 30ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಯಾರಿಗೆ ಟಿಕೆಟ್ ಸಿಗಲಿದೆ? ಕಾದು ನೋಡಬೇಕು.
ಶಿವಸೇನೆ ಕೂಡ ತನ್ನ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿದ್ದು, ಈಗಾಗಲೇ ಅಭ್ಯರ್ಥಿ ಸಹ ಘೋಷಿಸಿದೆ. ಶಿವಸೇನೆ ಪ್ರಚಾರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಗಮಿಸುವ ನಿರೀಕ್ಷೆ ಇದೆ.
ಭಾಷೆ ಮತ್ತು ಗಡಿ ವಿವಾದವನ್ನೇ ಬಂಡವಾಳ ಮಾಡಿಕೊಂಡಿರುವ ಶಿವಸೇನೆ ಮರಾಠಿ ಭಾಷಿಕರ ಮತ ಸೆಳೆಯಲು ಮುಂದಾಗಿದೆ. ಅದಕ್ಕಾಗಿಯೇ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.
2019ರ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಬೆಳಗಾವಿಯಲ್ಲಿ ಜಯಗಳಿಸಿದ್ದರು. ಅವರು ಕೋವಿಡ್ ಸೋಂಕಿನಿಂದಾಗಿ ಅಕಾಲಿಕವಾಗಿ ಮೃತಪಟ್ಟ ಕಾರಣ ಉಪ ಚುನಾವಣೆ ಎದುರಾಗಿದೆ.
Laxmi News 24×7